ಬೀದರ್: ಬಿಳಿಜೋಳ, ಕಡಲೆ, ಕುಸುಬೆ, ಗೋಧಿ ಇನ್ನಿತರ ಹಿಂಗಾರು ಬೆಳೆಗಳನ್ನು ಕಾಡುಪ್ರಾಣಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ರೈತರು ಹೊಸ ಪ್ಲಾನ್ ಮಾಡಿದ್ದಾರೆ. ಜಮೀನುಗಳ ಸುತ್ತ ರಂಗು ರಂಗಿನ ಹಳೆ ಸೀರೆಗಳನ್ನು ಕಟ್ಟಿ, ಬೆಳೆಗಳನ್ನು ರಕ್ಷಿಸಿಕೊಳ್ಳಲು ತಾವೇ ಮಾಸ್ಟರ್ ಪ್ಲಾನ್ ಕಂಡುಕೊಂಡಿದ್ದು, ಇದು ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.
ಈ ವರ್ಷ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಇದರ ನಡುವೆಯೂ ಕೆಲವರು ಹಿಂಗಾರಿನಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಆದರೆ ಈ ಬೆಳೆಗೆ ಕಾಡು ಪ್ರಾಣಿಗಳ ಕಾಟ ಶುರುವಾಗಿದೆ. ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಹೀಗಾಗಿ ಜಮೀನುಗಳ ಸುತ್ತ ಕಟ್ಟಿಗೆ ನೆಟ್ಟು ಅವುಗಳಿಗೆ ಬಣ್ಣಬಣ್ಣದ ಸೀರೆಗಳನ್ನು ಕಟ್ಟಿ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.
ಔರಾದ್ ತಾಲೂಕಿನಲ್ಲಿ ಹೆಚ್ಚಾಗಿ ಗುಡ್ಡಗಾಡು ಪ್ರದೇಶವಿದೆ. ಇಂಥ ನಿರ್ಜನ ಪ್ರದೇಶಗಳಲ್ಲಿ ಕಾಡುಹಂದಿ, ಜಿಂಕೆ, ಮಂಗಗಳು ಅಧಿಕ ಪ್ರಮಾಣದಲ್ಲಿ ವಾಸವಾಗಿವೆ. ಇದರಿಂದ ಬೆಳೆ ಕೈಗೆ ಬರುವಷ್ಟರಲ್ಲಿ ರೈತರು ಹತ್ತಾರು ಕುತ್ತುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ರಾತ್ರಿ ಸಮಯದಲ್ಲಿ ಹೊಲಗಳಿಗೆ ನುಗ್ಗುವ ಕಾಡು ಪ್ರಾಣಿಗಳ ಹಿಂಡು ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ.
ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು ಸೀರೆ ಕಟ್ಟುವ ಐಡಿಯಾ ಹುಡುಕಿದ್ದಾರೆ. ಬಹುತೇಕ ಜಮೀನುಗಳಲ್ಲಿ ಬದುವಿನಲ್ಲಿ ಸೀರೆ ಕಟ್ಟಿರುವುದರಿಂದ ಭೂತಾಯಿಗೆ ಸಿಂಗಾರ ಮಾಡಿದಂತೆ ಕಾಣುತ್ತದೆ. ಬಣ್ಣದ ಸೀರೆಗಳನ್ನು ಗಮನಿಸಿ ಪ್ರಾಡು ಪ್ರಾಣಿಗಳು ಹೊಲದ ಕಡೆಗೆ ಬರಲು ಹೆದರುತ್ತಿವೆ ಎನ್ನುತ್ತಾರೆ ರೈತರು.
ಇದನ್ನೂ ಓದಿ: ರಾಸಾಯನಿಕಗಳ ಸಿಂಪಡಣೆ ಇಲ್ಲದೆ ಕೀಟಗಳ ನಿಯಂತ್ರಿಸುವ ಮೋಹಕ ಬಲೆ