ಬೀದರ್: ಹುಮನಾಬಾದ್ ಕನಕಟ್ಟಾ ರಸ್ತೆ ಎಡಭಾಗದ ದ್ರಾಕ್ಷಿ ತೋಟದಲ್ಲಿ ಜುಲೈ 20 ರಂದು ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.
''ಬಂಧಿತರಿಂದ 1 ಲಕ್ಷ 25 ಸಾವಿರ ರೂ. ಮೌಲ್ಯದ 39.28 ಕೆಜಿಯ 9 ಶ್ರೀಗಂಧದ ಕಟ್ಟಿಗೆ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ 1.30 ಲಕ್ಷ ಬೆಲೆಯ ಎರಡು ದ್ವಿಚಕ್ರ ವಾಹನ, 1.97 ಲಕ್ಷದ 9 ಮೋಬೈಲ್‌ಗಳು ಹಾಗೂ ಎರಡು ಕೊಡಲಿಗಳು ವಶಕ್ಕೆ ಪಡೆದು ಆರೋಪಿಗಳ ಮೇಲೆ ಕರ್ನಾಟಕ ಅರಣ್ಯ ನಿಯಮದಡಿ ಪ್ರಕರಣ ದಾಖಲಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ಶುಕ್ರವಾರ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಇತ್ತಿಚೇಗೆ ಜಿಲ್ಲೆಯಲ್ಲಿ ಶ್ರೀಗಂಧದ ಮರಗಳ ಸಾಗಾಣಿಕೆಯ ಬಗ್ಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇಂತಹ ತಂಡಗಳ ಮೇಲೆ ನಿಗಾವಹಿಸಿತು. ಆದ್ದರಿಂದ ಈ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ'' ಎಂದರು. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಶ್ರೀಗಂಧದ ಮರಗಳ ಕಳ್ಳ ಸಾಗಾಣಿಕೆ ಮೂಲವನ್ನು ಭೇದಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದೆ'' ಎಂದು ಅವರು ತಿಳಿಸಿದರು.
ದ್ವಿಚಕ್ರ ವಾಹನ ಕಳ್ಳತನ ಪ್ರಕರಣ: ''ಅದೇ ರೀತಿ ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರ ತಂಡ ಕಾರ್ಯಾಚಣೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 2ಲಕ್ಷ 10 ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ'' ಎಂದರು.
ಶ್ರೀಗಂಧದ ಮರ ಕಡಿಯುವುದು ಕಂಡು ಬಂದರೆ ಮಾಹಿತಿ ನೀಡಿ: ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ ಮಾತನಾಡಿ, ''ಜಿಲ್ಲೆಯಲ್ಲಿ ಸಾಕಷ್ಟು ಶ್ರೀಗಂಧದ ಮರಗಳನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಇವುಗಳನ್ನು ಭೇದಿಸಲು ಜಿಲ್ಲೆಯ ಸಾರ್ವಜನಿಕರು ಹಾಗೂ ರೈತರ ಸಹಕಾರ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂತಹ ಮರಗಳನ್ನು ಕಡಿಯುವುದು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು'' ಎಂದು ಅವರು ಸಲಹೆ ನೀಡಿದರು.
ನಗದು ಬಹುಮಾನ: ಪ್ರಕರಣ ಭೇದಿಸಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ವಿತರಿಸಲಾಯಿತು. ಹುಮನಾಬಾದ ವಲಯ ಅರಣ್ಯ ಅಧಿಕಾರಿ ಶಿವಕುಮಾರ, ಪಿಎಸ್‌ಐ ಉಪೇಂದ್ರಕುಮಾರ, ಕಿರಣ, ಸಂತೋಷ ತಾವರಖೇಡ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಇದನ್ನೂ ಓದಿ: ನಕಲಿ ಮದ್ಯ ಮಾರಾಟ ಜಾಲ ಪತ್ತೆ: 4 ಲಕ್ಷ ಮೌಲ್ಯದ ಮದ್ಯ ಜಪ್ತಿ, ಇಬ್ಬರ ಬಂಧನ