ಬೀದರ್: ಬರದಿಂದ ಕೆರೆ, ನದಿ, ಕಾಲುವೆಗಳೆಲ್ಲ ಬತ್ತಿ ಹೋಗಿರುವ ಬೀದರ್ ಜಿಲ್ಲೆಯಲ್ಲೀಗ ಅಕ್ರಮ ಮರಳು ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಕೆಲ ಅಧಿಕಾರಿಗಳ ಕುಮ್ಮಕ್ಕಿನಿಂದ ಹಳ್ಳ, ನದಿ ಒಡಲನ್ನು ಬಗೆದು ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರಂಜಾ ಜಲಾಶಯದಿಂದ ಹರಿದು ಬರುವ ನೀರು ಬತ್ತಿ ಹೋಗಿದ್ದರಿಂದ ಭಾಲ್ಕಿ ತಾಲೂಕಿನ ಕುಂಟೆ ಸಿರ್ಸಿ ಗ್ರಾಮದ ಹೊರ ವಲಯದಲ್ಲಿ ಮರಳು ಚೋರರು ಅಡ್ಡೆ ಮಾಡಿಕೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಸೇರಿದಂತೆ ಒಂದಿಷ್ಟು ಜನ ಪುಡಾರಿಗಳ ಕೈ ಬಿಸಿ ಮಾಡಿ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುತ್ತಿದ್ದಾರೆ. ಹತ್ತಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಒಂದೊಂದು ಭಾಗದಲ್ಲಿ ಕೆಲಸ ಮಾಡಿದ್ರೆ, ಮರಳನ್ನ ಅಗೆದು ಒಂದೆಡೆ ಸಂಗ್ರಹಿಸಿಡುವ ಕೆಲಸವನ್ನು ಕೆಲ ಕಾರ್ಮಿಕರು ಮಾಡ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರೇ ಸೆರೆ ಹಿಡಿದು 'ಈಟಿವಿ ಭಾರತ'ಕ್ಕೆ ನೀಡಿದ್ದಾರೆ.
ಇದಷ್ಟೆ ಅಲ್ಲದೆ ಜಿಲ್ಲೆಯ ಜೀವನದಿ ಮಾಂಜ್ರಾದಲ್ಲೂ ಸಾಮೂಹಿಕವಾಗಿ ಅಕ್ರಮ ಮರಳು ಸಾಗಾಟ ವ್ಯಾಪಕವಾಗಿದೆ. ಭಾಲ್ಕಿ ತಾಲೂಕಿನ ಬಿರಿ(ಬಿ), ಮೇಹಕರ, ಸಾಯಗಾಂವ್, ಲಖನಗಾಂವ್ ಗ್ರಾಮದ ಸಮಿಪದಲ್ಲಿ ನದಿ ಒಡಲಿನಿಂದ ಮರಳನ್ನ ಲೂಟಿ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಮಾರುಕಟ್ಟೆಯಲ್ಲಿ ಒಂದು ಟ್ರಿಪ್ ಮರಳಿಗೆ 4,000 ರೂ.ಗೆ ಮಾರಾಟ ಮಾಡುವ ಮಾಫಿಯಾದವರು ಪುಗ್ಸಟ್ಟೆಯಾಗಿ ಸಿಗುವ ಮರಳಿನ ಆದಾಯದ ಶೇ. 40ರಷ್ಟು ಭಾಗ ಸ್ಥಳೀಯ ಅಧಿಕಾರಿಗಳು, ಹಳ್ಳಿ ಮಟ್ಟದ ನಾಯಕರು, ಡೀಸೆಲ್, ಕಾರ್ಮಿಕರ ಖರ್ಚಿನಲ್ಲಿ ಬಳಸಿಕೊಂಡು ಉಳಿದ ಶೇ. 60ರಷ್ಟನ್ನು ತಮ್ಮ ಜೇಬಿಗೆ ಹಾಕಿಕೊಳ್ತಿದ್ದಾರೆ. ಇದರಿಂದ ದಿನಕ್ಕೆ ಒಂದು ಟ್ರ್ಯಾಕ್ಟರ್ ಮಾಲೀಕ ಅಂದಾಜು 15ರಿಂದ 20 ಸಾವಿರ ರೂಪಾಯಿಯಷ್ಟು ಆದಾಯ ಮಾಡಿಕೊಳ್ತಿದ್ದಾರಂತೆ.
ಅಕ್ರಮ ಮರಳು ಸಾಗಾಟದಿಂದ ನದಿ ಒಡಲು ಬರಿದಾಗುವುದಲ್ಲದೆ ಪಕ್ಕದ ರೈತರ ಭೂಮಿಗಳು ಬಂಜರಾಗುತ್ತಿದ್ದು, ಮಳೆಗಾಲದಲ್ಲಿ ನದಿಯಲ್ಲಿನ ನೀರಿನ ರಭಸ ಜೋರಾಗ್ತಿದೆ. ಇದನ್ನು ತಡೆಯಲು ಎಷ್ಟು ಸಲ ದೂರು ನೀಡಿದರೂ ಅಧಿಕಾರಿಗಳೇ ಈ ಮಾಫಿಯಾದಲ್ಲಿ ಇರುವುದರಿಂದ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಮ ಕೈಗೊಳ್ಳಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಲೋಕೊಪಯೋಗಿ ಒಳನಾಡು ಬಂದರು ಇಲಾಖೆ ಸೇರಿದಂತೆ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಹಾಡಹಗಲೇ ಲೂಟಿ ಮಾಡುತ್ತಿರುವ ಮರಳು ದಂಧೆಕೋರರ ಅಕ್ರಮಕ್ಕೆ ಬ್ರೇಕ್ ಹಾಕುವ ಮೂಲಕ ರಾಜ್ಯದ ಫಲವತ್ತಾದ ಸಂಪತ್ತನ್ನು ಉಳಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.