ಬಸವಕಲ್ಯಾಣ(ಬೀದರ್): ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬೈಕ್ ಸವಾರಳೊಬ್ಬಳ ಮೇಲೆ ಲಾರಿ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಸಮೀಪ ಜರುಗಿದೆ.
ಬೇಲೂರ ಗ್ರಾಮದ ಸರಸ್ವತಿ ವೈಜಿನಾಥ ಗುಂಗೆ(52) ಘಟನೆಯಲ್ಲಿ ಮೃತಪಟ್ಟ ಮಹಿಳೆ. ಬಸವಕಲ್ಯಾಣ ನಗರದಿಂದ ಪತಿ ಜೊತೆ ಬೈಕ್‌ನಲ್ಲಿ ತೆರಳುವಾಗ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಎದುರಿನಿಂದ ಬಂದ ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿಯೊಂದು ಮಹಿಳೆ ಮೇಲೆ ಹರಿದು ಹೋಗಿದೆ ಎಂದು ತಿಳಿದು ಬಂದಿದೆ. ಮಹಿಳೆಯ ಪತಿ ವೈಜಿನಾಥಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಗೌತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.