ಬೀದರ್: ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆ' ಕಾರ್ಯಕ್ರಮಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಶಾಸಕ ಬಂಡೆಪ್ಪ ಕಾಶೆಂಪೂರ ಚಾಲನೆ ನೀಡಿದರು.
ಶನಿವಾರ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ರೈತರ ಮನೆಗಳಿಗೆ ತೆರಳಿ ಪಹಣಿ, ಜಾತಿ ಆದಾಯ ಪ್ರಮಾಣಪತ್ರ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಕಂದಾಯ ಇಲಾಖೆಯವರು ವಿನೂತನವಾಗಿ ಆರಂಭಿಸಿರುವ ಈ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ರೈತರಿಗೆ ಪಹಣಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಮನೆಮನೆಗೆ ತೆರಳಿ ವಿತರಿಸಲಾಗುತ್ತಿದೆ. ಅಧಿಕಾರಿಗಳು ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಈ ವಿನೂತನ ಯೋಜನೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಕಂದಾಯ ಇಲಾಖೆ ದಾಖಲೆಗಳನ್ನು ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ರೈತರ ಎಲ್ಲಾ ದಾಖಲೆಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುತ್ತೇವೆ. ಎಲ್ಲಾ ರೈತರು ಸಮೀಪದ ನಾಡ ಕಚೇರಿಗೆ ಹೋಗಿ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಇದ್ದರು.