ಬಸವಕಲ್ಯಾಣ : ಕೊರೊನಾ ಭೀತಿ ನಡುವೆಯೂ ಆಹಾರ ಧಾನ್ಯ ಸರಬರಾಜು ಮಾಡುವಲ್ಲಿ ಶ್ರಮಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿತರಕರಿಗೆ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳ ನಿಯೋಗ ಮಿನಿ ವಿಧಾನಸೌಧಕ್ಕೆ ತೆರಳಿ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಸರ್ಕಾರದಿಂದ ಪಡಿತರ ವಿತರಕರಿಗೆ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಒದಗಿಸಬೇಕು ಎಂದು ತಿಳಿಸಿದರು.
ಪಡಿತರ ಅಂಗಡಿಗಳಿಗೆ ಸಾವಿರಾರು ಜನ ಬಂದು ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ಕಾಯಿಲೆ ಇದ್ದವರು ಸಹ ಬಂದು ಪಡಿತರ ಪಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಡಿತರ ವಿತರಕರಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಮೆಂಡೋಳೆ, ತಾಲೂಕು ಅಧ್ಯಕ್ಷ ರಾಜಕುಮಾರ ಗುಂಡೆ, ಕಾರ್ಯಾಧ್ಯಕ್ಷ ಆನಂದರಾವ್ ಪಾಟೀಲ್, ಗೌರವಾಧ್ಯಕ್ಷ ಭೀಮರಾವ ಪಾಟೀಲ್, ಉಪಾಧ್ಯಕ್ಷ ಅಂದಪ್ಪ ಖಸಗೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ರಾಯಾಜಿ, ಕಾರ್ಯದರ್ಶಿ ಮಹಾದೇವ ಪಾಟೀಲ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಪಾಟೀಲ್, ಖಜಾಂಚಿ ಸಂಜು ಹಲಗೆ ಉಪಸ್ಥಿತರಿದ್ದರು.