ಬಸವಕಲ್ಯಾಣ(ಬೀದರ್): ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹುಲಸೂರ ಘಟಕದಿಂದ, ವೈದ್ಯಕೀಯ ಶುಲ್ಕ ಕಡಿಮೆ ಮಾಡುವಂತೆ ಒತ್ತಾಯಿಸಲಾಯಿತು.
ಖಾಸಗಿ ವೈದ್ಯರು ಅಧಿಕ ಹಣ ವಸೂಲಿ ಮಾಡುವುದನ್ನು ವಿರೋಧಿಸಿದ ಎಬಿವಿಪಿ ಹುಲಸೂರ ಘಟಕದ ಪದಾಧಿಕಾರಿಗಳ ನಿಯೋಗ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಹೊಸದಾಗಿ ನಿಗದಿಪಡಿಸಿದ ಶುಲ್ಕದ ಬದಲಾಗಿ ಹಿಂದಿನ ದರವನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದೆ. ಮಹಾಮಾರಿ ಕೊರೊನಾ ಹಾವಳಿದಿಂದ ತತ್ತರಿಸಿದ ಈ ಸಮಯದಲ್ಲಿ ವೈದ್ಯಕೀಯ ಶುಲ್ಕ ಹೆಚ್ಚಿಸುವುದು ಸಮಂಜಸವಲ್ಲ. ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳುಗಳಿಂದ ಅನೇಕ ಬಡ ಜನರು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಶುಲ್ಕ ಹೆಚ್ಚಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆಯಬೇಕಾದ ವೈದ್ಯರೇ ಅಮಾನವಿಯತೆಯಿಂದ ವರ್ತಿಸಬಾರದು ಎಂದು ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ನಾಗೇಶ ಮೇತ್ರೆ ಮನವಿ ಮಾಡಿದ್ದಾರೆ.
ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ದರ ಹೆಚ್ಚಿಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದರು ಕೂಡ ಇದುವರೆಗೆ ಇದ್ದ ಓಪಿಡಿ ಶುಲ್ಕ 50 ರೂ.ಯಿಂದ 100 ರೂ.ಗೆ ಹೆಚ್ಚಿಸಲಾಗಿದೆ. ಹಿಂದಿನ ದರದಲ್ಲಿಯೇ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಬಿವಿಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.