ಬಸವಕಲ್ಯಾಣ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ಕುಳಿತ ಅಂಗನವಾಡಿ ಕಾರ್ಯಕರ್ತೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ 2019 ಅಕ್ಟೋಬರ್ನಿಂದ ನೌಕರರಿಗೆ ಬರಬೇಕಾಗಿದ್ದ ಒಟ್ಟು ಎರಡು ಸಾವಿರ ರೂ. ಗೌರವ ಧನ ಕೂಡಲೇ ಪಾವತಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಪ್ರತಿ ತಿಂಗಳಿನ ಐದನೇ ತಾರೀಖಿನ ಒಳಗಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕು. ಎಸ್ಎಸ್ಎಲ್ಸಿ ಪಾಸಾದ ಅಂಗನವಾಡಿ ಸಹಾಯಕಿಯರಿಗೆ ಕೂಡಲೇ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
2019 ಮಾರ್ಚ್ ತಿಂಗಳಿಂದ ಇದುವರೆಗೆ ಮಾತೃಪೂರ್ಣ ಯೋಜನೆಯ ತರಕಾರಿ ಬಿಲ್ ಪಾವತಿಯಾಗಿಲ್ಲ. ಹಿಂದಿನ ಬಿಲ್ ಪಾವತಿಸುವ ಜೊತೆಗೆ ಪ್ರತಿ ತಿಂಗಳು ಮುಂಗಡವಾಗಿ ಬಿಲ್ ಪಾವತಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಹಣ ಪಾವತಿಸಿಲ್ಲ, ಬಾಡಿಗೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದರು.