ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಕಳೆದ ನಾಲ್ಕು ದಿನಗಳಿಂದ 100 ಕೋಟಿ ರೂ.ಗಳಿಗೂ ಅಧಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಕಾರಣ ತಕ್ಷಣವೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಇನ್ನೂ 100 ಕೋಟಿ ರೂ. ವೆಚ್ಚದ ಕಾಮಗಾರಿಗಳ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಅವರು ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಹಾಕಿಕೊಂಡಿದ್ದ ಗ್ರಾಮ ಸಂಚಾರ ಕಾರ್ಯಕ್ರಮ ಸಹ ರದ್ದಾಗಿದೆ.
ಔರಾದ್ ತಾಲೂಕಿನ ವಡಗಾಂವ್, ಚಿಂತಾಕಿ, ಸಂತಪೂರ್, ಠಾಣಾಕುಶನೂರ ಹಾಗೂ ಕಮಲನಗರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಮಾದರಿ ಗ್ರಾಮ, ರಸ್ತೆ, ಚರಂಡಿ, ಸಮುದಾಯ ಭವನ, ಪಶು ಆಸ್ಪತ್ರೆ ಕಟ್ಟಡ, ವಿದ್ಯುತ್ ಕೇಂದ್ರಗಳು, ಶಾಲೆ ಕಟ್ಟಡ ಸೇರಿದಂತೆ ಹಲವು ಯೋಜನೆಗಳಿಗೆ ಸಾಮೂಹಿಕವಾಗಿ ಚಾಲನೆ ನೀಡುತ್ತ ಕ್ಷೇತ್ರದ ಹಳ್ಳಿ-ಹಳ್ಳಿಗಳ ಸಂಚಾರ ಆರಂಭಿಸಿದ್ದರು.
ದಾಬಕಾ ಹಾಗೂ ಎಕಂಬಾ ವ್ಯಾಪ್ತಿ ಸೇರಿದಂತೆ ಔರಾದ್ ಪಟ್ಟಣದಲ್ಲೂ ಹಲವು ನಿಯೋಜಿತ ಕಾಮಗಾರಿಗಳ ಲೋಕಾರ್ಪಣೆ ಆಗಬೇಕಿತ್ತು. ಆದ್ರೆ ನೀತಿ ಸಂಹಿತೆ ಜಾರಿಯಾದ್ದರಿಂದ ಸಚಿವ ಪ್ರಭು ಚೌವ್ಹಾಣ್ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ ಎಂದು ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ತಿಳಿಸಿದ್ದಾರೆ.