ಬಸವಕಲ್ಯಾಣ : ಕೊರೊನಾ ಸಾಂಕ್ರಾಮಿಕ ತಡೆಗಟ್ಟುವಲ್ಲಿ ವೈದ್ಯಕೀಯ ಸಿಬ್ಬಂದಿಯಂತೆ ಆಶಾ ಕಾರ್ಯಕರ್ತೆಯರು ಕೂಡ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ, ಅವರ ಸೇವೆ ಶ್ಲಾಘನೀಯ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಗಮನಿಸಿದ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು. ಮನೆ ಬಿಟ್ಟು ಹೊರಗಡೆ ಬಂದು ಕೆಲಸ ಮಾಡಲು ಭಯಪಡುವ ಈ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಅವರ ಮಕ್ಕಳು ಮತ್ತು ಕುಟುಂಬದ ಹಿತ ಮರೆತು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದಿಸುವೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಸಹಾಯ:
ನಿಮಗೆ ಏನೇ ಸಮಸ್ಯೆ ಆದರೂ ಅದನ್ನು ನನ್ನ ಗಮನಕ್ಕೆ ತರಬೇಕು, ನಾನು ಸರಿಪಡಿಸುತ್ತೇನೆ. ಜನಪರ ಸೇವೆ ಮಾಡುತ್ತಿರುವ ನಿಮ್ಮ ಹಾಗು ನಿಮ್ಮ ಕುಟುಂಬದ ಹಿತ ಕಾಯಲು ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ ಎಂದು ಆಶಾ ಕಾರ್ಯಕರ್ತೆಯರಿಗೆ ಧೈರ್ಯ ತುಂಬಿದರು.
ಸುರಕ್ಷತೆಗೆ ಒತ್ತು ಕೊಡಿ :
ಸಮೀಕ್ಷೆಗೆಂದು ಮನೆ ಮನೆಗೆ ಹೋದಾಗ ಅಲ್ಲಿ ಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆಗಾಗ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು ಎಂದು ಕರೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸಾನಿಟೈಜರ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ. ನಾರಾಯಣರಾವ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.