ಬೀದರ್: ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಮೈಮೇಲಿನ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗುತ್ತಿದ್ದ, ಪಲ್ಸರ್ ಬೈಕ್ ಚೋರರ ಹೆಡೆಮುರಿ ಕಟ್ಟುವಲ್ಲಿ ಸಂತಪೂರ ಪೊಲೀಸರು ಯಶಸ್ವಿಯಾಗಿದ್ದಾರೆ.
ಔರಾದ್ ತಾಲೂಕಿನ ಸಂತಪೂರ ಗ್ರಾಮದ ಲಕ್ಷ್ಮಿ ಮಂದಿರ ಹತ್ತಿರದ ಅಂಬಿಕಾ ಎಂಬುವರ ಚಿನ್ನದ ಸರ ಕಳ್ಳತನ ಮಾಡಿ ಬೋರ್ಗಿ ಗ್ರಾಮದತ್ತ ಹೋಗ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಗ್ರಾಮಸ್ಥರ ಸಹಕಾರ ಪಡೆದು ರಸ್ತೆಯನ್ನು ಬ್ಲಾಕ್ ಮಾಡಿ ಸಿನಿಮೀಯ ಮಾದರಿಯಲ್ಲಿ 8 ಜನ ಇರಾನಿ ಗ್ಯಾಂಗ್ (ಇರಾನಿ ಕಾಲೋನಿ) ನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.20 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಎರಡು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಬೀದರ್ ನಗರದ ಇರಾನಿ ಕಾಲೋನಿಯ ಮಹಮ್ಮದ ಅಲಿ, ಜಾಫರ್ ಆಜಮ್, ಗುಲಾಮ್ ರಸೂಲ್, ಹಸನ್ ನಯನ್, ಫರಿದಾ(ಮಸ್ಕಾನ್, ಸಕೀನಾ) ಅಲಿ, ನೀತು, ಸೇಲ್ವಾನಿ ಬೇಗಂ ಹಾಗೂ ಸಬಿಗುಲ್ ಎಂಬಾತರನ್ನು ಬಂಧಿಸಲಾಗಿದೆ.
ಭಾಲ್ಕಿ ಡಿವೈಎಸ್ ಪಿ ಡಾ. ದೇವರಾಜ್ ಬಿ. ಅವರ ನೇತೃತ್ವದಲ್ಲಿ ಔರಾದ್ ಸಿಪಿಐ ರಾಘವೇಂದ್ರ, ಪಿಎಸ್ಐ ಪ್ರಭಾಕರ ಪಾಟೀಲ್, ಸುನೀಲ್ ಕೊರಿ, ಮಲ್ಲಮ್ಮ, ದಿಲೀಪ್, ಜ್ಞಾನೇಶ್ವರ, ರಾಜಕುಮಾರ್ ಪಾಂಚಾಳ, ಸತೀಶ, ರಾಜಕುಮಾರ್ ರೆಡ್ಡಿ ಅವರು ದಾಳಿ ನಡೆಸಿದ್ದಾರೆ. ಸಂತಪೂರ ಪೊಲೀಸರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರು ಅಭಿನಂಧಿಸಿದ್ದಾರೆ.