ಬಸವಕಲ್ಯಾಣ: ನಗರದ ವಿವಿಧ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ 9 ಹಂದಿಗಳು ಸಾವನ್ನಪ್ಪಿದ್ದು, ಜನರಲ್ಲಿ ಹಂದಿ ಜ್ವರದ ಆತಂಕ ಮೂಡಿಸಿದೆ.
ನಗರದ ಬಬ್ಬರ ಭಾಗದಲ್ಲಿ 2, ಹಿಮ್ಮತ ನಗರದಲ್ಲಿ 1, ಶಿವಾಜಿ ಚೌಕ ಸಮಿಪ 3, ಬಸ್ ನಿಲ್ದಾಣದ ಸಮಿಪ 3 ಹಂದಿಗಳು ಸೇರಿದಂತೆ ಒಟ್ಟು 9 ಹಂದಿಗಳು ಸಾವನ್ನಪ್ಪಿವೆ. ಹಂದಿಗಳ ಕಳೇಬರವನ್ನು ನಗರಸಭೆ ಸಿಬ್ಬಂದಿ ನಗರದ ಹೊರವಲಯಕ್ಕೆ ಸಾಗಿಸಿ, ಅಂತ್ಯಕ್ರಿಯೆ ನಡೆಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹುಮನಾಬಾದ್ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಹಂದಿ ಜ್ವರ(ಎಚ್-೧, ಎನ್-೧)ದಿಂದಾಗಿ ಅನೇಕ ಹಂದಿಗಳು ಸಾವನಪ್ಪಿದ್ದವು. ಹೀಗಾಗಿ ನಗರ ನಿವಾಸಿಗಳಲ್ಲಿ ಆತಂಕ ಮೂಡಿದೆ. ಆದರೆ ಇಲ್ಲಿನ ಹಂದಿಗಳ ಸಾವಿಗೆ ಜ್ವರ ಕಾರಣವಲ್ಲ. ಜ್ವರ ಕಾಣಿಸುವ ಪ್ರದೇಶದಲ್ಲಿ ಹಂದಿಗಳು ಸಾಮೂಹಿಕವಾಗಿ ಮೃತಪಡುತ್ತವೆ. ಇದು ಸಹಜ ಸಾವು ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹಂದಿಗಳ ಸಾವು ಹಿನ್ನೆಲೆ ನಗರದಲ್ಲಿನ ಎಲ್ಲಾ ಹಂದಿಗಳನ್ನು ತೆರವುಗೊಳಿಸಬೇಕು ಎಂದು ಸಂಬಂಧಪಟ್ಟವರಿಗೆ ಈಗಾಗಲೆ ನೋಟಿಸ್ ಜಾರಿಗೊಳಿಸಿ ಸೂಚನೆ ನೀಡಲಾಗಿದೆ ಎಂದು ನಗರಸಭೆ ಪರಿಸರ ನೈರ್ಮಲ್ಯ ನಿರೀಕ್ಷಕ ಅಶ್ವೀನ ಕಾಂಬಳೆ ತಿಳಿಸಿದ್ದಾರೆ.