ಬೀದರ್: ಜಿಲ್ಲೆಯಲ್ಲಿ ಲಾಕ್ಡೌನ್ ನಡುವೆಯೂ ಜನರು ನಗರದ ಹಲವು ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಜೋರಾಗಿತ್ತು.
ಮಡಿವಾಳ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನರು ರಸ್ತೆಗೆ ಬಂದಿದ್ದರು. 15 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟ ಬೀದರ್ ನಗರವನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದು, ಕಳೆದ ವಾರ 9 ಜನ ಸೋಂಕಿತರು ಗುಣಮುಖರಾದ ಮೇಲೆ ಲಾಕ್ಡೌನ್ ಸಡಿಲಿಕೆಯಾದಂತೆ ಕಂಡುಬಂದು ಜನರು ಹೊರ ಬರಲು ಆರಂಭಿಸಿದ್ದಾರೆ.
ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ಹತ್ತಿರ ಜನರು ಹಣ ಡ್ರಾ ಮಾಡಿಕೊಳ್ಳಲು ಮುಗಿ ಬಿದ್ದಿದ್ದರು. ಈ ವೇಳೆಯಲ್ಲಿ ನ್ಯೂ ಟೌನ್ ಪಿಎಸ್ಐ ಗುರು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಿಗೆ ತಿಳಿಹೇಳಲು ಹರಸಾಹಸ ಪಡಬೇಕಾಯಿತು.