ಬಸವಕಲ್ಯಾಣ : ನಾಗರ ಪಂಚಮಿ ನಿಮಿತ್ತ ನಾಡಿನಾದ್ಯಂತ ಹುತ್ತಕ್ಕೆ ಹಾಲು ಎರೆಯುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ರೆ, ಇಲ್ಲಿನ ಕೆಲ ಬಡಾವಣೆಗಳಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವಿಶಿಷ್ಟವಾಗಿ ಪಂಚಮಿ ಹಬ್ಬ ಆಚರಿಸಲಾಯಿತು.
ಕಲ್ಯಾಣ ಧ್ವನಿ ವೇದಿಕೆಯಿಂದ ನಗರ ಪಂಚಮಿ ಬದಲು ಬಸವ ಪಂಚಮಿ, ಹಾಲು ಹಾವಿಗಲ್ಲ ಬಡ ಮಕ್ಕಳಿಗೆ ಎನ್ನುವ ಶೀರ್ಷಿಕೆಯೊಂದಿಗೆ ನಗರದ ಶಾಪೂರ ಗಲ್ಲಿಯಲ್ಲಿ ನಗರಸಭೆ ಮಾಜಿ ಸದಸ್ಯ ರವೀಂದ್ರ ಕೋಳಕುರ ನೇತೃತ್ವದಲ್ಲಿ ಆಯೋಜಿಸಿದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ಹಾಲು ವಿತರಿಸಿ ವಿನೂತನ ಹಬ್ಬ ಆಚರಿಸುವ ಜೊತೆಗೆ ಬಸವ ಪಂಚಮಿ ಹಬ್ಬದ ವಿಶೇಷತೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲಾಯಿತು.
ಹಬ್ಬದ ಸಂದರ್ಭದಲ್ಲಿ ಕಲ್ಲಿನ ಮೂರ್ತಿಗೆ ಹಾಲು ಎರೆಯುವ ಮೂಲಕ ಮೌಢ್ಯತೆ ಆಚರಣೆಗೆ ಸಾವಿರಾರು ಲೀಟರ್ ಹಾಲು ವ್ಯರ್ಥ ಮಾಡಬಾರದು. ದೇಶದಲ್ಲಿ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಬಳಲುತ್ತಿದ್ದಾರೆ. ಪೌಷ್ಟಿಕಾಂಶ ಹೊಂದಿರುವ ಹಾಲು ಕಲ್ಲಿನ ಮೇಲೆ ಹಾಕಿ ವ್ಯರ್ಥ ಮಾಡುವ ಬದಲು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿತರಿಸಬೇಕು ಎಂದು ರವೀಂದ್ರ ಕೋಳಕುರ್ ಕರೆ ನೀಡಿದರು.
ತಾಲೂಕಿನ ಕೋಹಿನೂರ ಹಾಗೂ ಪರ್ತಾಪೂರ ಗ್ರಾಮದಲ್ಲಿಯೂ ಕೂಡ ಮಕ್ಕಳಿಗೆ ಹಾಲು ವಿತರಿಸಿ ಬಸವ ಪಂಚಮಿ ಹಬ್ಬ ವಿತರಿಸಲಾಯಿತು.