ಬಸವಕಲ್ಯಾಣ: ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ಪರತಾಪೂರ ಪಂಚಾಯತ್ನ 21 ಜನ ಸದಸ್ಯರ ಪೈಕಿ 19 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಉಪನಿರ್ದೇಶಕ ಡಿ.ಜಿ. ನಾರಾಯಣ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾದ ಧನರಾಜ ಮುಗಳೆ ಮತ್ತು ಗ್ರಾಮದ ಮುಖಂಡ ಮಕ್ಬೂಲ್ ಎನ್ನುವರು ಸೇರಿ ಪಂಚಾಯತ್ ಸದಸ್ಯರು ಹಣ ದುರುಪಯೋಗದಲ್ಲಿ ತೊಡಗಿದ್ದಾರೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಗ್ರಾಪಂ ಉಪಾಧ್ಯಕ್ಷರು ಸೇರಿದಂತೆ 19 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ದೂರಿನ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ತನಿಖೆ ವೇಳೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯತ್ನ 13ನೇ ಮತ್ತು 14ನೇ ಹಣಕಾಸು ಯೋಜನೆಯಡಿ ನೀರು ಸರಬರಾಜು ಯೋಜನೆ ಮತ್ತು ಹಣಕಾಸಿನ ವ್ಯವಹಾರದಲ್ಲಿ ಸದಸ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಚೆಕ್ ಪಡೆದು ದುರುಪಯೋಗ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ 1999ರ ಪ್ರಕಾರ 43(ಎ) ಮತ್ತು 48(4) ಮತ್ತು 48(5) ರಅಡಿಯಲ್ಲಿ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅನರ್ಹಗೊಂಡ ಸದಸ್ಯರು: ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಡಿ. ತಾಜೋದ್ದಿನ್, ಯುವರಾಜ ವಿಠಲ, ಭಾರತಬಾಯಿ ರಾಠೋಡ, ರಂಗಮ್ಮ ಮಾಣಿಕ, ಶರಣಪ್ಪ ಶಾಮರಾವ, ಗಂಗಮ್ಮ ಹಣಮಂತ, ವಂದನಾಬಾಯಿ ತಿಪ್ಪಣ್ಣ, ಬಸವರಾಜ ಬಾಬು, ವೆಂಕಟೇಶಪ್ಪ ಶಂಕ್ರಪ್ಪ, ಶೀತಲ ರಾಚಯ್ಯಾ, ಮೀನಾಬಾಯಿ ಭೀಮ, ಸುಮನ ದತ್ತು, ಕಲಾವತಿ ಸಿದ್ರಾಮ, ಉಲ್ಕಾವತಿ ವಿಲಾಸರಾವ, ಗೌರಮ್ಮಾ ವಿಶ್ವನಾಥ, ಲಲಿತಾಬಾಯಿ ಭಾವುರಾವ, ಲಲಿತಾಬಾಯಿ ಬಂಡೆಪ್ಪಾ, ಶಿವಾಜಿ ಘಂಟೆ ಮತ್ತು ದೀಲಿಪ ಶ್ರೀಧರ್ರಾವ ಎಂದು ತಿಳಿದು ಬಂದಿದೆ. ಗ್ರಾಪಂ ಅಧ್ಯಕ್ಷ ನಾಗೇಶ ಕಾಂಬಳೆ ಹಾಗೂ ಸದಸ್ಯ ಧನರಾಜ ಮುಗಳೆ ಇಬ್ಬರನ್ನು ಹೊರತುಪಡಿಸಿ ಉಳಿದವರು ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.