ಬೀದರ್ : ಗಡಿ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಜಿಲ್ಲಾಡಳಿತ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪಿ ಸಿ ಜಾಫರ್ ಅವಧಿಯಲ್ಲಿ ಇಂಥ ಪ್ರಯತ್ನ ಮಾಡಲಾಗಿತ್ತು. ಅದನ್ನೇ ಮುಂದುವರಿಸಲಾಗಿದೆ. ಜಿಲ್ಲಾ ರಂಗಮಂದಿರಲ್ಲಿ ಜೂನ್ 26 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2.30 ಗಂಟೆವರೆಗೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ 7 ಜನ IAS, ಇಬ್ಬರು IPS, ಇಬ್ಬರು IRS ಹಾಗೂ 5 ಜನ KAS ಅಧಿಕಾರಿಗಳು ಮಾತನಾಡಲಿದ್ದಾರೆ. ಈ ಅವಕಾಶವನ್ನು ಜಿಲ್ಲೆಯ 300 ಜನ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿದ್ರೆ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ಬಳಸಿಕೊಳ್ಳಲು ಲಿಂಕ್ ನೀಡಲಾಗುವುದು ಎಂದಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ ಬಾಧೆ ನಡುವೆ ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಿಕೊಂಡು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ರಾಮಚಂದ್ರನ್ ಆರ್ ಹೇಳಿದ್ದಾರೆ.