ಬೀದರ್: ಮತ ಭಿಕ್ಷೆ ಕೇಳಲು ಜೋಳಿಗೆ ಹಿಡಿದು ಬರಲಿದ್ದೇನೆ, ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ಕೈಜೋಡಿಸಿ ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ವಿನಂತಿಸಿದರು. ಟಿಕೆಟ್ ಕೈತಪ್ಪಿದ ಕಾರಣ ಮುಂದಿನ ನಡೆ ಕುರಿತು ನಿರ್ಣಯ ಕೈಗೊಳ್ಳಲು ಇಲ್ಲಿನ ಮಾಧವನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ನನ್ನ ತಂದೆ-ತಾಯಿ ತೀರಿ ಹೋಗಿದ್ದಾರೆ. ಕ್ಷೇತ್ರದ ಜನರೇ ನನ್ನ ತಂದೆ-ತಾಯಿ. ನನಗೂ ಒಂದು ಅವಕಾಶ ಕೊಡಿ ಎಂದರು. ಯಾವುದೇ ಭೇದಭಾವ ಮಾಡದೇ ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತಾ ಬಂದಿದ್ದೇನೆ. ನಾನೇನೂ ಆಸ್ತಿ ಮಾಡಿಲ್ಲ. ಒಳ್ಳೆಯ ಗುಣಗಳೇ ನನ್ನ ಆಸ್ತಿ. ಒಳ್ಳೆಯತನಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದರು.
ಈ ಚುನಾವಣೆ ಬೀದರ್ ಕ್ಷೇತ್ರದ ಜನರ ಸ್ವಾಭಿಮಾನದ ಚುನಾವಣೆ. ಎಲ್ಲರೂ ಹೃದಯದ ಮೇಲೆ ಕೈಯಿಟ್ಟು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರೆ, ಸ್ಪರ್ಧಿಸುವೆ. ಒಂದು ವೇಳೆ ಚುನಾವಣೆಯಲ್ಲಿ ಸೋತರೂ ನಿಮ್ಮ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುವೆ. ಆಯ್ಕೆಯಾದ ಮೇಲೆ ನೀವು ಹೇಳಿದ ಕೆಲಸ ಮಾಡಲಾಗದಿದ್ದರೆ ಅದೇ ಕ್ಷಣ ರಾಜೀನಾಮೆ ಕೊಡುವೆ ಎಂದು ಹೇಳಿದರು.
ದೇಹದಲ್ಲಿ ಜೀವ ಇರುವವರೆಗೂ ಜನಸೇವೆ ಮಾಡಬೇಕು. ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಅವರ ಹೆಸರು ಉಳಿಸಬೇಕು ಎನ್ನುವುದು ಬಿಟ್ಟರೆ ಬೇರೇನೂ ಆಸೆ ಇಲ್ಲ. ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎನ್ನುವುದಕ್ಕೆ ಬೇಜಾರಿಲ್ಲ ಎಂದರು.
ಏಪ್ರಿಲ್ 17 ಅಥವಾ 20 ರಂದು 50 ಸಾವಿರ ಜನರನ್ನು ಸೇರಿ ನಾಮಪತ್ರ ಸಲ್ಲಿಸುವೆ. ಎಲ್ಲರ ಆಶೀರ್ವಾದ ಇರುವ ಕಾರಣ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ವಿಶ್ವಾಸವಿದೆ ಎಂದ ಅವರು, ನನ್ನ ತಂದೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಆರು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿ ಜನ ಸೇವೆ ಮಾಡಿದ್ದಾರೆ. ನಾಗಮಾರಪಳ್ಳಿ ಕುಟುಂಬ ಯಾವುದೇ ಜಾತಿ, ವರ್ಗ ಅಥವಾ ವ್ಯಕ್ತಿಗೆ ಅನ್ಯಾಯ ಮಾಡಿಲ್ಲ. ಯಾರಿಗೂ ಕೆಟ್ಟದು ಬಯಸಿಲ್ಲ. ಬಿಜೆಪಿ ಯಾಕೆ ಟಿಕೆಟ್ ಕೊಡಲಿಲ್ಲ ಎಂದು ತಿಳಿಯುತ್ತಿಲ್ಲ. ಇದಕ್ಕಾಗಿ ಯಾರನ್ನೂ ದೂರುವುದಿಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬೆಂಬಲಿಗರು ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರ ಮೇಲೆ ಒತ್ತಡ ಹೇರಿದರು. ಸೂರ್ಯಕಾಂತ ನಾಗಮಾರಪಳ್ಳಿ ತುಮ್ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ ಎನ್ನುವ ಘೋಷಣೆಗಳನ್ನು ಕೂಗಿದರು.
ಇದನ್ನೂಓದಿ: ಜೆಡಿಎಸ್ 2ನೇ ಪಟ್ಟಿ: ಹಾಸನದಲ್ಲಿ ಭವಾನಿ ಬದಲು ಸ್ವರೂಪ್, ಕಡೂರಲ್ಲಿ ದತ್ತಗೆ ಟಿಕೆಟ್