ಬೀದರ್: 1000 ರೂಪಾಯಿ ಸಾಲ ವಾಪಸ್ ನೀಡಿಲ್ಲವೆಂದು ಗೆಳೆಯನನ್ನೇ ಇನ್ನೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಮೈಲೂರು ಬಡಾವಣೆ ನಿವಾಸಿ ಸ್ವಾಮಿದಾಸ(25) ಕೊಲೆಯಾಗಿರುವ ಯುವಕ. ಇದೇ ಬಡಾವಣೆಯ ರವಿ ಎಂಬಾತ ಈತನಿಗೆ 1000 ರೂಪಾಯಿ ಸಾಲ ಕೊಟ್ಟಿದ್ದ. ಸೋಮವಾರ ಹಣ ವಾಪಸ್ ನೀಡುವ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ರವಿ, ಸ್ವಾಮಿದಾಸನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ.
ಗಂಭೀರವಾಗಿ ಗಾಯಗೊಂಡ ಸ್ವಾಮಿದಾಸ ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಗಾಂಧಿಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.