ಬಸವಕಲ್ಯಾಣ: ನಗರದ ಮುಖ್ಯರಸ್ತೆಯ ಮೇಲೆ ಅತಿಕ್ರಮವಾಗಿ ಆಕ್ರಮಿಸಿಕೊಂಡಿದ್ದ ಅಂಗಡಿಗಳನ್ನು ಇಂದು ನಗರಸಭೆ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ನಗರದ ತ್ರಿಪುರಾಂತ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಅತಿಕ್ರಮವಾಗಿ ಹಲವು ಅಂಗಡಿಗಳನ್ನು ತೆರೆಯಲಾಗಿತ್ತು. ಇಲ್ಲಿ ಚರಂಡಿ ಹಾಗೂ ಪಾದಚಾರಿ ರಸ್ತೆ ಮಾರ್ಗದ ಕಾಮಗಾರಿ ನಡೆಯಲಿರುವುದರಿಂದ ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಎರಡು ದಿನಗಳ ಹಿಂದೆ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುವ ಕುರಿತು ಸೂಚನೆ ನೀಡಲಾಗಿತ್ತು. ಪೌರಾಯುಕ್ತ ಗೌತಮ ಕಾಂಬಳೆ, ಸಿಪಿಐ ಜೆ.ಎಸ್, ನ್ಯಾಮಗೌಡರ, ಪಿಎಸ್‌ಐ ಸುನಿಲಕುಮಾರ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಹಕಾರದೊಂದಿದೆ ಜೆಸಿಬಿ ಸಮೇತ ಕಾರ್ಯಾಚರಣೆ ನಡೆಸಲಾಯಿತು.
ನಗರಸಭೆ ಪರಿಸರ ಅಭಿಯಂತರ ಮನೋಜಕುಮಾರ, ನೈರ್ಮಲ್ಯ ನಿರೀಕ್ಷಕರಾದ ಅಶ್ವಿನ ಕಾಂಬಳೆ, ಬಾಬು ಗಾಯಕವಾಡ, ಗಫೂರಸಾಬ ಹಾಗೂ ಪೌರ ಕಾರ್ಮಿಕರು ಕಾರ್ಯಾಚರಣೆ ವೇಳೆ ಹಾಜರಿದ್ದರು.
ನಗರ ಸೌಂದರೀಕರಣಕ್ಕಾಗಿ ಕ್ರಮ: ಬಸವಕಲ್ಯಾಣ ಐತಿಹಾಸಿಕ ಪ್ರವಾಸಿ ಸ್ಥಳವಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ನಗರದ ಸೌಂದರ್ಯ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಯ ಎರಡೂ ಬದಿ ಚರಂಡಿ, ಪಾದಚಾರಿ ರಸ್ತೆ ಮತ್ತು ರೈಲಿಂಗ್ ಕೆಲಸಕ್ಕೆ ಮಂಜೂರಿ ಸಿಕ್ಕಿದೆ. ತಕ್ಷಣ ಕೆಲಸ ಆರಂಭವಾಗಲಿದೆ. ಹೀಗಾಗಿ ರಸ್ತೆ ಆಕ್ರಮಿಸಿದ ಕಟ್ಟೆ, ಶೆಡ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗೌತಮ ಕಾಂಬಳೆ ತಿಳಿಸಿದರು.