ಬಸವಕಲ್ಯಾಣ (ಬೀದರ್): ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಉಗ್ಯೋಗ ಕಲ್ಪಿಸುವ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಆರಂಭಿಸಲಾದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ.ನಾರಾಯಣ ರಾವ್ ಹಾಗೂ ಜಿ.ಪಂ. ಸಿಇಒ ಗ್ಯಾನೇಂದ್ರ ಕುಮಾರ್ ಗಂಗವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ರಾಜೇಶ್ವರ, ಹಿರನಾಗಾಂವ, ಭೋಸ್ಲಾ, ಶಿರೂರಿವಾಡಿ, ಆಲಗೂಡ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವಿಕ್ಷಿಸಿದ ಅವರು, ಕೆಲಸ ಮಾಡುವಾಗ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್ಗಳನ್ನು ಬಳಸಬೇಕು. ಕೂಲಿ ಕಾರ್ಮಿಕರು ಕೆಲಸ ಮಾಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಿಇಒ ಗ್ಯಾನೇಂದ್ರ ಕುಮಾರ ಗಂಗವಾರ ಸೂಚಿಸಿದರು.
ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಯಲ್ಲಿರುವ ಲಾಕ್ ಡೌನ್ ಆದೇಶದಿಂದಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸವ ಉದ್ದೇಶದಿಂದ ನರೇಗಾ ಯೋಜನೆಯಡಿ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ನಾರಾಯಣ ರಾವ್ ಸಲಹೆ ನೀಡಿದರು.
ಕೆಲಸದ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದ್ದು, ಇದು ಇಲ್ಲಿ ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾ.ಪಂ. ಇಒ ಮಡೋಳಪ್ಪ ಪಿಎಸ್ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಮತ್ತು ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ಯಶೋಧಾ ರಾಠೋಡ, ಜಿ.ಪಂ. ಮಾಜಿ ಅಧ್ಯಕ್ಷ ನೀಲಕಂಠ ರಾಠೊಡ, ತಾ.ಪಂ.ನ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಜೈ ಪ್ರಕಾಶ ಚವ್ಹಾಣ, ತಾಂತ್ರಿಕ ಸಂಯೊಜಕ ಶಿವರಾಜ ಪಾಟೀಲ್ ಉಪಸ್ಥಿತರಿದ್ದರು.