ಬೀದರ್: ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಶಾಸಕ, ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರ ಜಾತಿ ಪ್ರಮಾಣಪತ್ರ ನಕಲಿ ಆಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಕವಡ್ಯಾಳ, ಮರು ಪರಿಶೀಲನೆ ಮಾಡುವಂತೆ ಕೋರಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಮಹಿಳಾ ಮೋರ್ಚಾ ಅಧ್ಯಕ್ಷೆ ಮಿನಾಕ್ಷಿ ಸಂಗ್ರಾಮ ಅವರೊಂದಿಗೆ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭು ಚೌವ್ಹಾಣ್ ಅವರು ಪರಿಶಿಷ್ಟ ಜಾತಿ ಲಂಬಾಣಿ ಕುರಿತು ನಕಲಿ ದಾಖಲೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಮುಖಂಡರಾದ ಬಾಬಾರಾವ್ ತಾರೆ, ಶಂಕರ ದೊಡ್ಡಿ ದೂರಿದ್ದರು. ಸದರಿ ಪ್ರಕರಣ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೇ 2ರಂದು ದೂರು ಸಲ್ಲಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ್ ಅವರು ಸಚಿವ ಪ್ರಭು ಚೌವ್ಹಾಣ್ ಅವರಿಗೆ 15 ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ನೋಟಿಸ್ ಕೂಡ ನೀಡಿದ್ದಾರೆ ಎಂದು ಕವಡ್ಯಾಳ ಹೇಳಿದರು.
ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆ 2011ರ ಕಲಂ 4ರ ಅಡಿಯಲ್ಲಿ ಪುನರ್ ಪರಿಶೀಲನಾ ಅರ್ಜಿ ನೀಡಿದ್ದು, ಈ ವಿಚಾರದಲ್ಲಿ ಸಚಿವ ಪ್ರಭು ಚೌವ್ಹಾಣ್ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.