ಬೀದರ: ರೈತರ ಒಡನಾಡಿ ಜಾನುವಾರು ರಕ್ಷಣೆ ನನ್ನ ಮೊದಲ ಆದ್ಯತೆಯಾಗಿದೆ. ಅದರಂತೆ ಪಶು ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ಹೇಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ 68 ಸಂಚಾರಿ ಪಶು ಚಿಕಿತ್ಸಾ ಅಂಬ್ಯುಲೆನ್ಸ್ಗಳಿಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.
ಮೂಕ ಪ್ರಾಣಿಗಳಿಗೆ ನೆರವಾಗಬೇಕೆನ್ನುವ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನು ಸಲ್ಲಿಸಿದ್ದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಜಾನುವಾರುಗಳ ಹಿತದೃಷ್ಟಿಯಿಂದ ಉತ್ತಮ ಯೋಜನೆಗಳು ಜಾರಿಗೊಳಿಸಲು ನೆರವಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ 15 ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿ ಸೇವೆ ಆರಂಭಿಸಲಾಗಿದೆ. ಈ ಸೇವೆಯನ್ನು ಗಮನಿಸಿದ ಕೇಂದ್ರ ಸರ್ಕಾರ ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಇಡೀ ರಾಷ್ಟ್ರದಲ್ಲಿ ಜಾರಿಗೆಗೊಳಿಸಿರುವುದಕ್ಕೆ ಹೆಮ್ಮೆಯಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುದಾನ : ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿ ಜಾರಿಗೊಳಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 275 ಪಶು ಆಂಬ್ಯುಲೆನ್ಸ್ಗಳನ್ನು ನೀಡಿದೆ. ಕೇಂದ್ರದ ಶೇ.60 ಹಾಗೂ ರಾಜ್ಯದ ಶೇ.40ರಷ್ಟು ಅನುದಾನದಲ್ಲಿ ಇವುಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಗೋಮಾತೆ ಮೇಲೆ ಅತಿ ಪ್ರೀತಿ, ಕಾಳಜಿಯಿಂದಾಗಿ ಪಶು ಸಂಗೋಪನೆ ಖಾತೆಯನ್ನು ಸ್ವ-ಇಚ್ಛೆಯಿಂದ ಪಡೆದಿದ್ದೇನೆ. ಅದಕ್ಕೆ ತಕ್ಕಂತೆ ಕೆಲಸವನ್ನೂ ಸಹ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಇದೇ ಖಾತೆಯನ್ನು ನಿರ್ವಹಿಸುವೆ ಎಂದು ಪ್ರಭು ಚವಾಣ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಣಿ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ: ಜಾನುವಾರುಗಳ ಹಿತರಕ್ಷಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭ, ಐತಿಹಾಸಿಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳ ಬಿಡುಗಡೆ ಸೇರಿದಂತೆ ಅನೇಕ ಉತ್ತಮ ಕೆಲಸಗಳಾಗಿವೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಸಿಬ್ಬಂದಿಯ ಮುಂಬಡ್ತಿ ಸಮಸ್ಯೆ ನಿವಾರಿಸಲಾಗಿದೆ ಎಂದು ತಿಳಿಸಿದರು.
ಸಹಾಯವಾಣಿ 1962ಗೆ ಕರೆ ಮಾಡಿ: ಈಗಾಗಲೇ ಬೆಂಗಳೂರು ಮತ್ತು ಬೆಳಗಾವಿ ವಿಭಾಗದಲ್ಲಿ ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಆಂಬ್ಯುಲೆನ್ಸ್ಗಳಿಗೆ ಲೋಕಾರ್ಪಣೆ ಮಾಡಿರುವುದಕ್ಕೆ ಹೆಚ್ಚಿನ ಸಂತೋಷ ನೀಡಿದೆ. ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಜಾನುವಾರುಗಳ ಮಾಲೀಕರು ಸಹಾಯವಾಣಿ 1962ಗೆ ಕರೆ ಮಾಡಿದ್ದಲ್ಲಿ ರೈತರ ಮನೆ ಬಾಗಿಲಿಗೆ ಆಂಬ್ಯುಲೆನ್ಸ್ ಬಂದು ಸೇವೆ ನೀಡಲಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು. ಅದ ರೀತಿ ಪಶು ವೈದ್ಯಾಧಿಕಾರಿಗಳು ಕೂಡ ಸರಿಯಾಗಿ ಕೆಲಸ ಮಾಡಬೇಕೆಂದು ಸಚಿವರು ಸೂಚನೆ ನೀಡಿದರು.
ಗೋವು ಕಸಾಯಿಖಾನೆಗೆ ಸಾಗಣೆಗೆ ಕಡಿವಾಣ: ಗೋವುಗಳನ್ನು ಕಸಾಯಿಖಾನೆಗೆ ಸಾಗಣೆಗೆ ಕಡಿವಾಣ ಹಾಕಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ನಂತರ 30 ಸಾವಿರ ಹಸುಗಳನ್ನು ರಕ್ಷಿಸಲಾಗಿದೆ. ಸುಮಾರು ಎರಡು ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಹೊಸ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲಿ ಗೋಮಾಳಕ್ಕೆ ಜಮೀನು ಕಾಯ್ದಿರಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಶಾಸಕ ರಹೀಮ ಖಾನ್ ಅವರು ಮಾತನಾಡಿ, ಪಸು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚೆಕ್ ಹಸ್ತಾಂತರ: ಬೀದರ ನಗರಭಿವೃದ್ಧಿ ಪ್ರಾಧಿಕಾರದಿಂದ ಪುಣ್ಯ ಕೋಟಿ ದತ್ತು ಯೋಜನೆಯಡಿ 31 ಗೋವುಗಳನ್ನು ದತ್ತು ಪಡೆಯಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಅವರು ಸಚಿವರಿಗೆ ಚೆಕ್ ಹಸ್ತಾಂತರಿಸಿದರು.
ಇದನ್ನೂಓದಿ:ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ, ಬಜೆಟ್‍ನಲ್ಲಿ ರೈತರಿಗೆ ವಿಶೇಷ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ