ಬೀದರ್: ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ನಿಮಿತ್ತ 17 ಜಿಲ್ಲೆಗಳಲ್ಲಿ ತಲಾ 50 ಸಾವಿರ ಪಶುಗಳಿಗೆ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದರು.
ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡಾದಲ್ಲಿ ಪಶು ಸಂಗೋಪನಾ ಇಲಾಖೆ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಆಗಸ್ಟ್ 1 ರಿಂದ ರಾಜ್ಯದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹಸುಗಳು ಅಥವಾ ಎಮ್ಮೆಗಳು ಕೃತಕ ಗರ್ಭಧಾರಣೆ ಯೋಜನೆಗೆ ಬರಲಿದ್ದು ದೇಶಿ ಮತ್ತು ವಿದೇಶಿ ತಳಿಯ ಬ್ರೀಡ್ನ ವೀರ್ಯ ನೀಡಿ ಗರ್ಭಧಾರಣೆ ಮಾಡಿಸಲಾಗುವುದು ಎಂದರು.
ಜಿಲ್ಲೆಗೊಂದು ಪಶು ಆ್ಯಂಬುಲೆನ್ಸ್:
ಪಶು ಸಂಗೋಪನಾ ಇಲಾಖೆ ಜಿಲ್ಲೆಗೊಂದು ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಮುಂದಾಗಿದೆ. ಆಗಸ್ಟ್ 05 ರಂದು ಬೀದರ್ ಜಿಲ್ಲೆಯಲ್ಲಿ 108 ಮಾದರಿಯಲ್ಲಿ ಪಶು ಇಲಾಖೆಯ ಆ್ಯಂಬುಲೆನ್ಸ್ ಸೇವೆ ಜಾರಿಯಾಗಲಿದ್ದು ಪಶುವಿನ ಎಕ್ಸರೇ ಸೇರಿದಂತೆ ಅಗತ್ಯ ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.