ಬಸವಕಲ್ಯಾಣ: ಕೆಲ ದಿನಗಳ ಹಿಂದೆ ಸುರಿದ ಅಧಿಕ ಮಳೆಯಿಂದಾಗಿ ಬೆಳೆಹಾನಿ ಕುರಿತು ಕಂದಾಯ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಜಂಟಿ ಸಮೀಕ್ಷೆಗೆ ಆದೇಶಿಸಲಾಗಿದ್ದು, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರಧನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಇತ್ತೀಚಿಗೆ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಹೊಲಗಳ ತುಂಬೆಲ್ಲ ನೀರು ಆವರಿಸಿದೆ. ಬೆಳೆದು ನಿಂತಿದ್ದ ಎಲ್ಲ ಫಸಲು ಹಾಳಾಗಿದೆ. ಹಾನಿಗೆ ಬೇಗ ಪರಿಹಾರ ಧನ ಸಿಗುವಂತೆ ಮಾಡಬೇಕು ಎಂದು ರೈತರು ಸಚಿವರಲ್ಲಿ ಮನವಿ ಮಾಡಿದರು.
ಸರ್ಕಾರವು ರೈತರ ಬೆನ್ನಿಗಿದೆ. ನಿಮ್ಮ ಪರವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿದ್ದೇನೆ. ಈಗಾಗಲೇ ಮುಖ್ಯಮಂತ್ರಿಯವರು ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದಾರೆ. ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲೆಯಲ್ಲಿ ರೈತರ ಹೊಲಗಳಲ್ಲಿನ ಹಾಳಾದ ಬೆಳೆಗಳ ಸಮೀಕ್ಷೆ ನಡೆಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿನ ನಡೆಯುವ ಸಚಿವ ಸಂಪುಟದಲ್ಲಿ ಜಿಲ್ಲೆಯ ಬೆಳೆಗಳ ಹಾನಿ ಕುರಿತು ಚರ್ಚಿಸಿ ಸರ್ಕಾರದಿಂದ ಆದಷ್ಟು ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು. ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ರೈತರಿಗೆ ಧೈರ್ಯ ತುಂಬುವ ಕೆಲಸ ಸಚಿವರು ಮಾಡಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಜಗನ್ನಾಥ ಚಿಲ್ಲಾಬಟ್ಟೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅತಿ ವೃಷ್ಟಿಯಿಂದಾಗಿ ತಾಲೂಕು ಸೇರಿ ಜಿಲ್ಲಾದ್ಯಂತ ರೈತರ ಬೆಳೆಗಳು ಹಾಳಾಗಿ ರೈತ ಇಂದು ಕಣ್ಣೀರಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಸ್ಯೆಯ ಗಂಭೀರತೆ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.
ರೈತರ ಸಮಸ್ಯೆ ಆಲಿಸಿದ ಸಚಿವರು, ಈಗಾಗಲೇ ಬೀದರ್ ಜಿಲ್ಲೆ ಅತೀವೃಷ್ಟಿಯಿಂದ ಹಾಳಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಬೇಕಾದ ಮುಂಜಾಗ್ರತೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸಲಹೆ ನೀಡಿದೆ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ, ಜಿ.ಪಂ. ಸದಸ್ಯ ಗುಂಡುರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ದತ್ತಾತ್ರೆಯ ತುಗಾಂವಕರ, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಪ್ರಮುಖರಾದ ಸಂಜಯ ಪಟವಾರಿ, ಶರಣು ಸಲಗರ, ವಿಜಯಕುಮಾರ ಮಂಠಾಳೆ, ದೀಪಕ ಗಾಯಕವಾಡ, ಸೂರ್ಯಕಾಂತ ಚಿಲ್ಲಾಬಟ್ಟೆ, ಯುವರಾಜ ಜಾಧವ, ಅರವಿಂದ ಮುತ್ತೆ, ಅಶೋಕ ಹೊಕ್ರಾಣಿ, ಗುರುನಾಥ ಜಾಂತಿಕರ, ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.