ಬೀದರ್ : ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸುತ್ತಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಮುಂದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸ್ಪೆಷಲ್ ಪ್ಯಾಕೇಜ್ ಸಿದ್ದ ಪಡಿಸಿದ್ದು, ಇದಕ್ಕಾಗಿ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಬಂಪರ್ ಕೊಡುಗೆ ನೀಡುವಂತೆ ಮನವಿ ಮಾಡಲಿದ್ದಾರೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ಅಧಿಕಾರಿಗಳ ಸಭೆ ನಡೆಸಿ ಒಂದು ವಾರದಿಂದ ನಡೆಯುತ್ತಿರುವ ಸಿದ್ದತೆ ಕುರಿತು ಪರಿಶೀಲನೆ ಮಾಡಿ ಕೊನೆಯದಾಗಿ ಸಿದ್ದವಾದ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆಸಿದರು. ಸೂಪರ್ ಸ್ಲೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಜಿಲ್ಲೆಯಲ್ಲಿನ ಪಿಎಚ್ ಸಿ, ಸಿಎಚ್ ಸಿ ಹಾಗೂ ವಸತಿ ಗೃಹಗಳನ್ನು ಹೊಸದಾಗಿ ನಿರ್ಮಿಸುವುದು ಸೇರಿದಂತೆ ವಿವಿಧ ಸೌಕರ್ಯಕ್ಕಾಗಿ ಒಟ್ಟು 150 ಕೋಟಿ ರೂ. ಬೇಡಿಕೆಯ ಕ್ರಿಯಾಯೋಜನೆಯನ್ನು ಡಿಎಚ್ಒ ಎಂ.ಎ.ಜಬ್ಬಾರ ಸಲ್ಲಿಸಿದ್ದಾರೆ.
ಅಕ್ಷರ ದಾಸೋಹ ಭವನಗಳ ನಿರ್ಮಾಣ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಶಾಲೆಗಳ ನಿರ್ಮಾಣ, ಪ್ರೌಢಶಾಲೆಗಳಿಗೆ ಸ್ಮಾರ್ಟ್ ಗ್ರೀನ್ ಬೋರ್ಡ್ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಒಟ್ಟು 70 ಕೋಟಿ ರೂ.ಗಳ ಬೇಡಿಕೆಯ ಕ್ರಿಯಾಯೋಜನೆ ರೂಪಿಸಿದ್ದಾರೆ. ಮೂರು ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ಕಟ್ಟಡಗಳ ನಿರ್ಮಾಣ, 30 ಹೋಬಳಿಗಳಲ್ಲಿ ನಾಡಕಚೇರಿಗಳ ಕಟ್ಟಡಗಳ ನಿರ್ಮಾಣ, 5 ತಹಶೀಲ್ ಕಚೇರಿಗಳ ಆಧುನೀಕರಣ ಹಾಗೂ ಸಹಾಯಕ ಆಯಕ್ತರ ಕಚೇರಿಗಳ ಆಧುನೀಕರಣ ಬೇಡಿಕೆಗಳ ಕಂದಾಯ ಇಲಾಖೆಗಳ ಕ್ರಿಯಾಯೋಜನೆ ಸಿದ್ದವಾಗಿದೆ.
ಜಿಲ್ಲೆಯಲ್ಲಿ ನೀರಾವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸದಾಗಿ 200 ಕೋಟಿ ರೂ.ಗಳ ಬೇಡಿಕೆಯ ಕ್ರಿಯಾಯೋಜನೆ ಸಲ್ಲಿಸುವಂತೆ ಸಚಿವರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ಎಂಟು ತಾಲೂಕುಗಳಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ, ರಂಗ ತಾಲೀಮು ನಿರ್ಮಾಣ, ಜಿಲ್ಲಾ ರಂಗಮಂದಿರ ನವೀಕರಣದ ಬೇಡಿಕೆಗಳ ಕ್ರಿಯಾಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ವಿವಿಧ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ಗಳ ನಿರ್ಮಾಣಕ್ಕೆ ಒಟ್ಟು 39 ಕೋಟಿ ರೂಗಳ ಬೇಡಿಕೆಯನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು. ಬಿಸಿಎಂ ಇಲಾಖೆಯ ಅಧಿಕಾರಿ ಅವರು, ಕೆಎಎಸ್ ಐಎಎಸ್ ಸ್ಟಡಿ ಸೆಂಟರ್, ಮೋರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣ, ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ ನಿರ್ಮಾಣ ಮಾಡಲು ಸಿದ್ದವಾದ ಪ್ರಸ್ತಾವನೆ ನೀಡಿದರು.
ಉಜಳಂಬಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾತಿ, ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗೆ ಅನುದಾನ, ಈಗಾಗಲೇ ಗುರುತಿಸಿರುವ 16 ನಿವೇಶನಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವುದಕ್ಕೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು. ಈ ವೇಳೆ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ನಾರಾಯಣರಾವ್, ಜಿ.ಪಂ. ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಸಿಇಒ ಮಹಾಂತೇಶ ಬೀಳಗಿ ಸೇರಿದಂತೆ ಮತ್ತಿತರರು ಇದ್ದರು.