ಬಸವಕಲ್ಯಾಣ: ಕೊರೊನಾ ಶಂಕಿತರು ಐಸೋಲೇಷನ್ ವಾರ್ಡ್ನಲ್ಲಿಯೇ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ಸಾಮಾಜಿಕ ಅಂತರದ ನಿಯಮ ಗಾಳಿಗೆ ತೂರಿದ್ದಾರೆ.
ಐಸೋಲೇಷನ್ ವಾರ್ಡ್ನಲ್ಲಿಯೇ ಸಾಮೂಹಿಕ ಪ್ರಾರ್ಥನೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಇಂದು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ನಲ್ಲಿದ್ದ ಕೆಲ ಜನರು ತಮ್ಮ ಬೆಡ್ಗಳಿಂದ ಕೆಳಗೆ ಕುಳಿತು ಪ್ರಾರ್ಥನೆ ಮಾಡುತ್ತಿರುವುದು ಗಮನಕ್ಕೆ ಬಂತು. ಈ ದೃಶ್ಯ ಕಂಡು ಕೆಲ ಕ್ಷಣ ದಿಗ್ಭ್ರಮೆಗೊಳಗಾದ ಸಚಿವರು, ಸ್ಥಳದಲ್ಲಿದ್ದ ತಹಶೀಲ್ದಾರ್, ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಒಟ್ಟಾಗಿ ಕುಳಿತುಕೊಳ್ಳುವುದು ಬೇಡ ಎಂದು ದೇಶದಾದ್ಯಂತ ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ನೀವು ಇದೆಲ್ಲ ಮುಂದುವರಿಸಿದ್ದೀರಿ. ಹೀಗೆ ಮಾಡೋದು ಸರಿಯಲ್ಲ, ಏನೇ ಮಾಡೋದಿದ್ರೂ ಮನೆಯಲ್ಲಿ ಇದ್ದಾಗ ಮಾಡಬೇಕು. ಆಸ್ಪತ್ರೆಗೆ ಬಂದು ಹೀಗೆಲ್ಲ ಮಾಡುವುದು ಸರಿಯಲ್ಲ, ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ, ಸರ್ಕಾರದ ನಿಯಮಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಆಸ್ಪತ್ರೆಯಲ್ಲಿರುವ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಬೇಕು. ಐಸೋಲೇಷನ್ ವಾರ್ಡ್ಗೆ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಸ್ಥಳದಲ್ಲಿದ್ದ ಸಿಪಿಐಗೆ ಸಚಿವರು ಸೂಚಿಸಿದರು.