ಬೀದರ್: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದದ ನಡುವೆಯೇ ಮಹಾರಾಷ್ಟ್ರದ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಬೀದರ್ ಗಡಿಯ ಲಾತುರ್ ಜಿಲ್ಲೆಯ ದೇವಣಿ ತಾಲೂಕಿನ ಬೊಂಬಳಿಯ ಜನರು ಆಗ್ರಹಿಸಿದ್ದಾರೆ.
ಬೊಂಬಳಿ ಗ್ರಾಮದ ನಿವಾಸಿಗಳು ಗ್ರಾಮದಲ್ಲಿ ಸಭೆ ನಡೆಸಿ, ಮಹಾರಾಷ್ಟ್ರ ಸರ್ಕಾರ ಗ್ರಾಮಗಳ ಅಭಿವೃದ್ಧಿ ಮಾಡದೇ ತಾರತಮ್ಯ ಎಸಗುತ್ತಿದೆ. ಕರ್ನಾಟಕ ಸರ್ಕಾರ ರೈತರಿಗಾಗಿ ಹಾಗೂ ಬಡ ಜನರಿಗಾಗಿ ಒಳ್ಳೆಯ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ತಂದಿದೆ. ಹಾಗಾಗಿ ನಮ್ಮ ಗ್ರಾಮ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತಿ ಚುನಾವಣೆಯನ್ನೂ ಬಹಿಷ್ಕಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಲಾತುರ್ ಜಿಲ್ಲಾಧಿಕಾರಿಗೂ ಪತ್ರ ಬರೆದು ಬೇಡಿಕೆ ಇಟ್ಟಿರುವ ಗ್ರಾಮಸ್ಥರು, ಗ್ರಾಮದಲ್ಲಿ ವ್ಯವಸಾಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು, ಮಕ್ಕಳಿಗೆ ಶಾಲೆ ಕಲಿಯಲು ಒಳ್ಳೆಯ ವ್ಯವಸ್ಥೆಯನ್ನು ಮಾಡಬೇಕು, ಬಸ್ ದರ ಕಡಿಮೆ ಮಾಡಬೇಕು, ಕರ್ನಾಟಕ ಸರ್ಕಾರದಿಂದ ಕೃಷಿಕರಿಗೆ ಸಿಗುವ 50 ಸಾವಿರ ರೂ. ಅನುದಾನ ನಮಗೂ ಸಿಗುವಂತೆ ಮಾಡಬೇಕು, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಖಾಯಂ ಎಂಬಿಬಿಎಸ್ ವೈದ್ಯರನ್ನು ನಿಯೋಜನೆ ಮಾಡಬೇಕು, ಕೃಷಿಗೆ 10 ಹೆಚ್.ಪಿ. ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಇಲ್ಲವಾದಲ್ಲಿ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ: ಶಿಂಧೆ, ಕೇಂದ್ರದ ವಿರುದ್ಧ ಹರಿಹಾಯ್ದ ಸಂಜಯ್ ರಾವತ್