ಬಸವಕಲ್ಯಾಣ(ಬೀದರ್): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ವರ್ಷದಲ್ಲಿ ಕನಿಷ್ಠ 200 ದಿನ ಉದ್ಯೋಗ ಕಲ್ಪಿಸಿ ದಿನಕ್ಕೆ 600 ರೂ. ಕೂಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕೂಲಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೊರೊನಾ ಪ್ರೇರೇಪಿತ ಲಾಕ್ಡೌನ್ನಿಂದಾಗಿ ಸಾವಿರಾರು ಬಡ ಕೂಲಿಕಾರರ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕ ಸಮಸ್ಯೆಗೆ ಸಿಲುಕಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಬಿಟ್ಟರೆ. ಬೇರೆ ಕೆಲಸ ಇಲ್ಲದಂತಾಗಿದೆ ಎಂದರು.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುತ್ತಿರುವ ಕೂಲಿ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಆದ್ದರಿಂದ ವರ್ಷದಲ್ಲಿ ಕನಿಷ್ಠ 200 ದಿನ ಕೆಲಸ, ದಿನಕ್ಕೆ 600 ರೂ. ಕೂಲಿ ಪಾವತಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.