ಬೀದರ್ : ಬಾಂಡ್ ವಿತರಣೆ ಮಾಡುವ ಖಾಸಗಿ ಮಧ್ಯವರ್ತಿಗಳು ಸಾರ್ವಜನಿಕರಿಂದ ಪ್ರತಿ ಬಾಂಡ್ಗೆ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದು, ತಪ್ಪಿತಸ್ಥ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಜಿಲ್ಲೆಯ ಔರಾದ್ ಪಟ್ಟಣದ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಕೇಂದ್ರದಲ್ಲಿ ಸಾರ್ವಜನಿಕರಿಂದ ಪ್ರತಿ ಬಾಂಡ್ ಮೇಲೆ 20 ರಿಂದ 30 ರುಪಾಯಿವರೆಗೆ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಪ್ರತಿ ಬಾಂಡ್ ಗೆ 20 ರೂಪಾಯಿಗೆ ಹೆಚ್ಚುವರಿಯಾಗಿ 50 ರೂಪಾಯಿವರೆಗೆ ಹಣ ಪಡೆದು ಬಾಂಡ್ ಮಾರಾಟ ಮಾಡ್ತಿದ್ದಾರೆ ಎಂದು ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಶ್ರೀಮಂತ ಸಪಾಟೆ ಆರೋಪಿಸಿದ್ದಾರೆ.
ಮುಂಗಾರು ಹಂಗಾಮಿನ ಆರಂಭದಲ್ಲಿ ರೈತರು ಬೀಜ, ಗೊಬ್ಬರ ಸೇರಿದಂತೆ ಕಂದಾಯ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗಾಗಿ ಬಾಂಡ್ ಅಗತ್ಯವಾದ ಬೆನ್ನಲ್ಲೆ ಬಾಂಡ್ ವಿತರಕರು ನ್ಯಾಯಯುತವಾಗಿ ಸಿಗುವ ಕಮಿಷನ್ ಬಿಟ್ಟು ಅಕ್ರಮವಾಗಿ ಜನರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಇಂತಹ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.