ಬೀದರ್: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜೂನಿಯರ್ ವೈದ್ಯಕೀಯ ಸಿಬ್ಬಂದಿ ಅಪಾಯದಲ್ಲಿದ್ದಾರೆ. ಮೆಡಿಕಲ್ ಕಾಲೇಜುಗಳು ICMR ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಸೋಂಕು ಹರಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖಂಡ್ರೆ, ಕೋವಿಡ್-19 ಸೋಂಕು ಬಾಧಿತರಿಗೆ ಚಿಕಿತ್ಸೆ ನೀಡುತ್ತಿರುವ ಕಲಬುರಗಿ ವೈದ್ಯ ವಿದ್ಯಾರ್ಥಿಗೆ ಸೋಂಕು ತಗುಲಿರವುದು ಆಘಾತಕಾರಿ ಸಂಗತಿ ಎಂದರು. ಪಿಪಿಇ ಕಿಟ್ಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗ್ತಿದೆ. ಕೊರೊನಾ ವಾರ್ಡ್ಗಳಲ್ಲಿ ಹಿರಿಯ ವೈದ್ಯರ ಸಹಕಾರವಿಲ್ಲದೆ ವಿದ್ಯಾರ್ಥಿ ವೈದ್ಯರೇ ಚಿಕಿತ್ಸೆ ನೀಡುತ್ತಿರುವುದೇ ಸೋಂಕು ಹರಡಲು ಕಾರಣ ಎಂದರು. ಸರ್ಕಾರ ಬರೀ ಬಾಯಿ ಮಾತಲ್ಲಿ ಎಲ್ಲವೂ ಮಾಡುತ್ತಿದ್ದೇವೆ ಅಂತಾ ಹೇಳಿದ್ರೆ ಆಗಲ್ಲ. ಕೊರೊನಾ ವಿಚಾರದಲ್ಲಿ ಮುಲಾಜಿಲ್ಲದೆ ಅಗತ್ಯ ಸೌಲಭ್ಯಗಳನ್ನು ವೈದ್ಯರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೀದರ್ ಸೇರಿದಂತೆ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕೊರೊನಾ ಸೋಂಕು ಬಾಧಿತರನ್ನು ಚಿಕಿತ್ಸೆ ನೀಡುತ್ತಿರುವ ಎಂಬಿಬಿಎಸ್ ಮುಗಿಸಿ ಇಂಟರ್ನ್ಶಿಪ್ ಮಾಡುತ್ತಿರುವ ವೈದ್ಯರ ರಕ್ಷಣೆಗೆ ಸರ್ಕಾರ ಬರಬೇಕು. ಇಲ್ಲವಾದ್ರೆ ಈ ಸೋಂಕು ಅಷ್ಟು ಸುಲಭವಾಗಿ ನಿಯಂತ್ರಣಕ್ಕೆ ಬರೋದಿಲ್ಲ ಎಂದು ಎಚ್ಚರಿಸಿದರು.