ಬೀದರ್ : ಬೀದರ್ ಜಿಲ್ಲೆಯಲ್ಲಿ ಈಟಿವಿ ಭಾರತ್ ವರದಿ ಅಧಿಕಾರಿಗಳ ಕಣ್ಣು ತೆರೆಸಿದೆ. ಇದರಿಂದಹಲವು ವರ್ಷಗಳಿಂದ ಆತಂಕದಲ್ಲಿದ್ದ ರೈತರು ನಿರಾಳರಾಗಿದ್ದಾರೆ.
ಹಲವಾರು ದಿನಗಳಿಂದ ರೈತರ ಜಮೀನಿನಲ್ಲಿ ಜೋತುಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಜೆಸ್ಕಾಂ ಅಧಿಕಾರಿಗಳು ಕೊನೆಗೂ ಸರಿಪಡಿಸಿದ್ದಾರೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ.
ಜಿಲ್ಲೆಯ ಕಮಲನಗರ ತಾಲೂಕಿನ ಮಾಳೆಗಾಂವ್ ಗ್ರಾಮದ ರೈತರ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದವು. ಇದರಿಂದಾಗಿ ರೈತರು ಗದ್ದೆಯಲ್ಲಿ ಕೆಲಸ ಮಾಡದಂತಹ ದಃಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಜಾನುವಾರುಗಳು ಗದ್ದೆಯಲ್ಲಿ ಓಡಾಡುವುದೇ ದುಸ್ತರವಾಗಿತ್ತು.
ಈ ಕುರಿತು 'ಜೋತು ಬಿದ್ದು ಬಲಿಗಾಗಿ ಕಾದಿದೆ ಹೈಟೆನ್ಷನ್ ವಿದ್ಯುತ್ ತಂತಿ' ಎಂಬ ತಲೆ ಬರಹದ ಅಡಿಯಲ್ಲಿ 'ಈಟಿವಿ ಭಾರತ್' ವಿಸ್ತೃತ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜೆಸ್ಕಾಂ ವಲಯಾಧಿಕಾರಿ ಚಂದ್ರಕಾಂತ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಹೊಸ ಕಂಬಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.