ಬಸವಕಲ್ಯಾಣ : ಉಪಚುನಾವಣೆ ಹಿನ್ನೆಲೆ ಮರಾಠಾ ಸಮಾಜದಿಂದ ಏರ್ಪಡಿಸಿದ್ದ ಸಭೆಗೆ ಆಗಮಿಸಿದ ಸಂಸದ ಭಗವಂತ್ ಖುಬಾಗೆ ವೇದಿಕೆಗೆ ಬರಲು ಅಡ್ಡಿಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಸ್ ನಿಲ್ದಾಣ ಎದುರಿನ ಕೀಸ್ಟಲ್ ಕಲ್ಯಾಣ ಮಂಟಪದಲ್ಲಿ ಮರಾಠಾ ಸಮಾಜದ ಸಭೆಯನ್ನ ಆಯೋಜಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ಪಕ್ಷದ ಅಭ್ಯರ್ಥಿ ಶರಣು ಸಲಗರ್ ಜೊತೆ ಆಗಮಿಸಿದ ಸಂಸದ ಖೂಬಾಗೆ ವೇದಿಕೆ ಮುಂಭಾಗವೇ ತಡೆದ ಕಾರ್ಯಕರ್ತರು, ಧಿಕ್ಕಾರ ಕೂಗಿದರು. ಯಾವುದೇ ಕಾರಣಕ್ಕೂ ವೇದಿಕೆಗೆ ಬರಲು ಆಸ್ಪದ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಕಾಲ ಸ್ಥಳದಲ್ಲಿ ಗೊಂದಲಮಯ ವಾತಾವರಣ : ಜನರ ವಿರೋಧದ ನಡುವೆಯು ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿಯೇ ನಿಂತ ಸಂಸದರು ವೇದಿಕೆಯಲ್ಲಿ ಕೇವಲ ಎರಡು ನಿಮಿಷ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದು ಪರಿಪರಿಯಾಗಿ ಮನವಿ ಮಾಡಿದರು.
ಆದರೆ, ಪಟ್ಟು ಬಿಡದ ಸಮಾಜದ ಮುಖಂಡರು, ಇದು ನಮ್ಮ ಸಮಾಜದ ಸಭೆ, ಯಾವುದೇ ಕಾರಣಕ್ಕೂ ವೇದಿಕೆಗೆ ಬರಲು ಬಿಡಲ್ಲ ಎಂದು ಕಿಡಿ ಕಾರಿದರು.
ಸಮಾಜದ ಮುಖಂಡರ ವಿರೊಧದಿಂದಾಗಿ ಪೊಲೀಸ್ ರಕ್ಷಣೆಯಲ್ಲಿ ಸ್ಥಳದಿಂದ ಸಂಸದ ಖೂಬಾ ನಿರ್ಗಮಿಸಬೇಕಾಯಿತು. ಸಭೆಯಲ್ಲಿ ಉಪಚುನಾವಣೆ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎಂಜಿ ಮುಳೆ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.