ಬಸವಕಲ್ಯಾಣ : ರಾಜ್ಯದಲ್ಲಿರುವ ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ನಿರ್ಲಕ್ಷ ವಹಿಸಿದ್ರೆ ಕೆಲವೇ ದಿನಗಳಲ್ಲಿ ಬರಲಿರುವ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸೇರಿದಂತೆ ಮುಂದಿನ ಎಲ್ಲ ಚುನಾವಣೆಯಲ್ಲಿ ಮತದಾನಕ್ಕೆ ಬಹಿಷ್ಕರಿಸಲು ಬೇಡ ಜಂಗಮ ಸಮಾಜ ನಿರ್ಧರಿಸಿದೆ.
ನಗರದ ಆರ್ಯ ಸಮಾಜ ಭವನದಲ್ಲಿ ನಡೆದ ಜಿಲ್ಲಾ ಬೇಡ ಜಂಗಮ ಸಮಾಜದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದ್ದು, ಹೈ-ಕ ಬೇಡ ಜಂಗಮ ಸಮಾಜ ಸಂಸ್ಥೆ ಜಿಲ್ಲಾ ಘಟಕದಿಂದ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಗಿದೆ. ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಸಂಬಂಧಿತರಿಗೆ ಆದೇಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಯತ್ನ ಕೇಸ್: ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ಸೇರಿ 43 ಇನ್ಸ್ಪೆಕ್ಟರ್ಗಳ ವರ್ಗ
ಸಭೆ ಉದ್ಘಾಟಿಸಿ ಮಾತನಾಡಿದ ಬೇಡ ಜಂಗಮ ಸಮಾಜದ ಜಿಲ್ಲಾ ಮುಖಂಡ ರವೀಂದ್ರ ಸ್ವಾಮಿ, ರಾಜ್ಯದಲ್ಲಿರುವ ಬೇಡ ಜಂಗಮರಿಗೆ ಸಂವಿಧಾನ ಬದ್ಧವಾಗಿ ಸರ್ಕಾರವು ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಕಾನೂನು ಹೋರಾಟ ಮುಖಾಂತರ ನಾನು ಈಗಾಗಲೇ ಜಾತಿ ಪ್ರಮಾಣ ಪತ್ರ ಪಡೆದಿದ್ದು, ತುಳಿತಕ್ಕೊಳಗಾದ ಬೇಡ ಜಂಗಮ ಸಮಾಜ ಬಾಂಧವರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೇಡ ಜಂಗಮ ಸಮಾಜ ಸಂಸ್ಥೆ ಜಿಲ್ಲಾಧ್ಯಕ್ಷ ಡಾ.ಬಸವರಾಜ ಸ್ವಾಮಿ ಮಾತನಾಡಿ, ಜಂಗಮ ಸಮಾಜಕ್ಕೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ. ನ್ಯಾಯಯುತ ಬೇಡಿಕೆಗೆ ಒಂದು ವೇಳೆ ಜಾತಿ ಪ್ರಮಾಣ ಪತ್ರ ನೀಡದೇ ಹೋದರೆ ಬಸವಕಲ್ಯಾಣದಲ್ಲಿ ರಾಜ್ಯ ಮಟ್ಟದ ಬೇಡ ಜಂಗಮ ಸಮಾಜದ ಸಮಾವೇಶ ಆಯೋಜಿಸಿ, ಉಗ್ರ ಹೋರಾಟ ಮಾಡಲು ಸಮಾಜದ ಜನ ಸಿದ್ಧರಾಗಬೇಕು ಎಂದರು.