ಬೀದರ್: ಭಯಂಕರ ಬಿಸಿಲಿನ ಧಗೆಯಿಂದ ಬೆಂದು ಹೋದ, ಬಯಲುಸೀಮೆ ಬೀದರ್ ಜಿಲ್ಲೆಯಲ್ಲಿ ಇದೀಗ ಮೈ ಕೊರೆಯುವ ಚಳಿಯಿದೆ. ಜನರ ಮೈಯಲ್ಲಿ ಗಡ ಗಡ ನಡುಕ ಹೆಚ್ಚಾಗಿದ್ದು, ಬೆಳಗ್ಗೆ ಮತ್ತು ಸಂಜೆಯಾಗುತ್ತಿದ್ದಂತೆ ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿಯ ಮೊರೆ ಹೊಗ್ತಿದ್ದಾರೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಭಾಗದಲ್ಲಿ ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿಯ ಮೊರೆ ಹೊಗ್ತಿದ್ದಾರೆ. ಕೆಲವರು ಬೆಚ್ಚನೆಯ ವಸ್ತ್ರ ಧರಿಸಿದರೆ ಮತ್ತೆ ಕೆಲವರು ಬೆಳಿಗ್ಗೆ 10 ಗಂಟೆವರೆಗೆ ಮನೆಯಿಂದ ಹೊರ ಬರದೆ ಚಳಿಯಿಂದ ದೂರ ಉಳಿದಿದ್ದಾರೆ. ಸಂಜೆ 5 ಗಂಟೆ ಆಗ್ತಿದ್ದಂತೆ ಚಳಿ ಮೈ ಆವರಿಸಿಕೊಳ್ತಿದ್ದು, ಕೆಲಸಕ್ಕೆ ಹೋಗುವ ಜನರು ಬೇಗನೆ ಮನೆ ಸೇರ್ತಿದ್ದಾರೆ.
ಜಿಲ್ಲೆಯ ಕಾರಂಜಾ ಜಲಾಶಯದ ಸುತ್ತಲಿನ ಪ್ರದೇಶ, ಮಾಂಜ್ರಾ ನದಿ ತಟದ ಪ್ರದೇಶದಲ್ಲಂತೂ ಚಳಿ ಹೆಚ್ಚಾಗಿದೆ. ಗ್ರಾಮೀಣ ಭಾಗ ಸೇರಿದಂತೆ ಬೀದರ್ ನಗರದಲ್ಲೂ ಚಳಿ ಜನರಲ್ಲಿ ನಡುಕ ಹುಟ್ಟಿಸಿದೆ. ಇಂಥ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಜನರು ಬಿಸಿಲಿನ ತಾಪ ಹಾಗೂ ಬೆಂಕಿಯ ಧಗೆಯನ್ನು ಬಳಸಿಕೊಳ್ತಿರುವುದು ಕಂಡು ಬರುತ್ತಿದೆ.