ಬಸವಕಲ್ಯಾಣ (ಬೀದರ್) : ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಜೂನ್ 25 ರಿಂದ ಜುಲೈ 4ರವರೆಗೆ ತಾಲೂಕಿನ 19 ಕೇಂದ್ರಗಳು ಮತ್ತು 5 ಉಪಕೇಂದ್ರಗಳಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಇಒ ಸಿ ಜಿ ಹಳ್ಳದ ತಿಳಿಸಿದ್ದಾರೆ.
ಸರ್ಕಾರದ ಆದೇಶದನ್ವಯ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಮಾಸ್ಕ್, ಸೈನಿಟೈಸರ್ ವ್ಯವಸ್ಥೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರು, ಇಬ್ಬರು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ಮತ್ತು ಐವರು ಶಿಕ್ಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಮಕ್ಕಳಿಗಾಗಿ ಎಲ್ಲ ಮಾರ್ಗಗಳಲ್ಲಿ ಉಚಿತವಾಗಿ ಬರಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಯಾವ ಊರಿಗೆ ಬಸ್ ಸೌಕರ್ಯ ಇರುವುದಿಲ್ಲವೋ ಅಂತಹ ಕಡೆ ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಗಳನ್ನು ಬಳಸಲಾಗುತ್ತಿದೆ. ಮಕ್ಕಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆತ್ಮಸ್ಥೈರ್ಯ ತುಂಬಿ ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬಾರದು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಕೋರಿದ್ದಾರೆ. ಇದಲ್ಲದೆ ಪರೀಕ್ಷೆ ನಿಮಿತ್ತ ತಾಲೂಕಿನ ಕೋಹಿನೂರ, ಮಂಠಾಳ ಗ್ರಾಮಗಳಲ್ಲಿಯ ಪರೀಕ್ಷಾ ಕೇಂದ್ರಗಳಿಗೆ ಬಿಇಒ ಸಿ ಜಿ ಹಳ್ಳದ ಭೇಟಿ ನೀಡಿ ಪರಿಶೀಲಿಸಿದರು. ವ್ಯವಸ್ಥೆಯಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಸಂಬಂಧಿತರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.