ಬೀದರ್: ಭಾಲ್ಕಿ ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಲಂಚಾವತಾರ ಕುರಿತು ಜನರು ಪ್ರತಿಭಟನೆ ಮಾಡಿದರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಕಾರ್ಮಿಕರ ಕಾರ್ಡ್, ಸರ್ಕಾರದ ಸಹಾಯಧನ ನೀಡಲು ಇಲಾಖೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುವರ್ಣ ಎಂಬ ಅಧಿಕಾರಿ ಫಲಾನುಭವಿಗಳಿಂದ ಲಂಚ ಸ್ವೀಕರಿಸುವ ವಿಡಿಯೋಗಳು ಬಹಿರಂಗವಾಗಿದ್ದು ಈ ಕುರಿತು 'ಈಟಿವಿ ಭಾರತ' ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು.
ಈ ಬಗ್ಗೆ ಬೀದರ್ನಲ್ಲಿ ಮಾತನಾಡಿದ ಮಾಜಿ ಸಚಿವ ಈಶ್ವರ ಖಂಡ್ರೆ, ಲಂಚಾವತಾರದ ಬಗ್ಗೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ದೂರು ನೀಡಿದ್ದವು. ಆದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮೌನವಾಗಿದೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಇತ್ತ ಸರ್ಕಾರ ಖಾತೆ ಹಂಚಿಕೆ ಮಾಡುತ್ತ ರಾಜಕೀಯದಲ್ಲಿ ಬಿಸಿಯಾಗಿದೆ. ಹೀಗಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುವುದಲ್ಲದೆ ಸಂಬಂಧಪಟ್ಟ ಸಚಿವರ, ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.