ಬಸವಕಲ್ಯಾಣ: ಪ್ರೀತಿಸಿ ಮದುವೆಯಾದ ವರ್ಷ ಕಳೆಯುವುದರಲ್ಲಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಬೇಡರವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗಮ್ಮ ಬಾಜೀರಾವ್ ಪಾಟೀಲ್ (22) ಕೊಲೆಯಾದ ಯುವತಿ. 10 ತಿಂಗಳ ಹಿಂದೆ ಅಂದ್ರೆ ಫೆಬ್ರುವರಿ ತಿಂಗಳಲ್ಲಿ ಅದೇ ಗ್ರಾಮದಲ್ಲಿರುವ ತಮ್ಮ ಸಂಬಂಧಿಕಳಾದ ನಾಗಮ್ಮಳನ್ನು ಪ್ರೀತಿಸಿದ ಬಾಜೀರಾವ್, ಆಕೆಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಕೋರ್ಟ್ನಲ್ಲಿ ಮದುವೆಯಾಗಿದ್ದನಂತೆ.
ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ಜೋಡಿ ನಂತರದ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆಗಾಗ ಜಗಳವಾಡುತಿದ್ದರು. ಶನಿವಾರ ಬೆಳಗ್ಗೆ ಮನೆಯಲ್ಲಿ ನಡೆದ ಜಗಳದಲ್ಲಿ ಕಟ್ಟಿಗೆಯಿಂದ ನಾಗಮ್ಮಳಿಗೆ ಪತಿ ಮನಬಂದಂತೆ ಥಳಿಸಿದ್ದಾನೆ. ಥಳಿತಕ್ಕೊಳಗಾದ ನಾಗಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.
ಈ ಕುರಿತು ಯುವತಿ ತಂದೆ ನೀಡಿದ ದೂರಿನ ಮೇರೆಗೆ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಬಾಜೀರಾವ್ ಸೇರಿದಂತೆ ಆತನ ತಂದೆ ಮತ್ತು ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸುದ್ದಿ ತಿಳಿದ ಎಎಸ್ಪಿ ಗೋಪಾಲ್ ಬ್ಯಾಕೋಡ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ತಹಶೀಲ್ದಾರ ಸಾವಿತ್ರಿ ಸಲಗರ್, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‌ಐ ವಸೀಮ್ ಪಟೇಲ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.