ಬೀದರ್: ರಾಜ್ಯಾದ್ಯಂತ ಮುಂಗಾರು ಅಬ್ಬರ ಮುಂದುವರೆದಿದೆ. ಗಡಿ ಜಿಲ್ಲೆ ಬೀದರ್ನಲ್ಲೂ ಧಾರಾಕಾರ ಮಳೆಯಾಗುತ್ತಿದೆ. ತಡರಾತ್ರಿ ಜಿಲ್ಲೆಯಲ್ಲಿ ಸರಾಸರಿ 8.77 ಮಿ.ಮೀ. ಮಳೆ ದಾಖಲಾಗಿದೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ಭರ್ತಿಯಾಗಿವೆ. ಕೆಲವೆಡೆ ಪ್ರವಾಹ ಭೀತಿ ಉಂಟಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಆತಂಕ ರೈತರದ್ದು. ಮಂಗಳವಾರ ರಾತ್ರಿ ಬೀದರ್ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಬುಧವಾರವೂ ಅಲ್ಲಲ್ಲಿ ಮಳೆ ಸುರಿದಿದೆ.
ಇಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ: ಜಿಲ್ಲೆಯಲ್ಲಿ 100-130 ಮಿ.ಮೀ ಮಳೆಯಾಗುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಇಂದು ರೆಡ್ ಅಲರ್ಟ್ ಘೋಷಿಸಿದೆ. ಗ್ರಾಮಗಳಲ್ಲಿ ಡಂಗುರ ಸಾರಿ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಈಗಾಗಲೇ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದ್ದಾರೆ. ಗುರುವಾರ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸೇತುವೆ ದಾಟಲು ಹೋಗಿ ಯುವಕ ನೀರುಪಾಲು: ಸೇತುವೆ ದಾಟಲು ಹೋಗಿ ಯುವಕ ನೀರು ಪಾಲಾಗಿರುವ ಘಟನೆ ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಸೇತುವೆ ದಾಟುವಾಗ ಮಲ್ಲಪ್ಪ ಶರಣಪ್ಪ ಕರೆಪನೋರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಎಸ್ಪಿ ಚೆನ್ನಬಸವಣ್ಣ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶೋಧ ಕಾರ್ಯ ಮುಂದುವರೆದಿದ್ದು, ಯುವಕ ಪತ್ತೆಯಾಗಿಲ್ಲ.
ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ಜಿಲ್ಲೆಯ ಕಾರಂಜಾ ಜಲಾಶಯದಿಂದ 3,300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯ ದಡದಲ್ಲಿರುವ 38 ಹಳ್ಳಿಯ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಯಾವುದೇ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ : Mullayyanagiri: ಭಾರಿ ಮಳೆ, ಅಲ್ಲಲ್ಲಿ ಭೂಕುಸಿತ; ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ
ಇನ್ನೂ ಒಂದು ವಾರ ಮಳೆ ಮುನ್ಸೂಚನೆ: ಮಳೆಗೆ ಈಗಾಗಲೇ 38 ಜನರು ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಬುಧವಾರ ತಿಳಿಸಿದ್ದಾರೆ. ಹಾಗೆಯೇ ಇನ್ನೂ ಒಂದು ವಾರ ಮಳೆ ಮುಂದುವರಿಯಲಿದ್ದು, ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.