ಬೀದರ್: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಸೇತುವೆ, ಕೆರೆ-ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ರಾತ್ರಿಯಿಡೀ ಸುರಿದ ಮಳೆಯಿಂದ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಬಿರುಗಾಳಿ ಮಿಶ್ರಿತ ವರುಣನ ಅಬ್ಬರದಿಂದ ಬಹುತೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ನಗರ ಪ್ರದೇಶದಲ್ಲಿ ಚರಂಡಿ ನೀರಿನ ಹರಿವು ರಸ್ತೆಗೆ ಹರಿದು ಬಂದು ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇರ್ಡಾ ಗ್ರಾಮದ ಬಳಿಯ ಸೇತುವೆ, ಕಮಲನಗರ ಬಳಿಯ ರಾಂಪೂರ್ ಸೇತುವೆ, ಬೆಳಕೊಣಿ ಸೇತುವೆ, ಹುಮನಾಬಾದ್ ತಾಲೂಕಿನ ನಂದಗಾಂವ್ ಸೇತುವೆ ಭರ್ತಿಯಾಗಿದ್ದು, ಅವುಗಳ ಮೇಲಿಂದ ನೀರು ಹರಿದು ಬರುತ್ತಿರುವುದರಿಂದ ಸಂಚಾರ ಸ್ತಬ್ಧವಾಗಿದೆ.
ಹೊಲ-ಗದ್ದೆಗಳು ಜಲಾವೃತಗೊಂಡಿದ್ದು, ಕಬ್ಬು, ತೊಗರಿ ಸೇರಿದಂತೆ ಇತರೆ ಬೆಳೆಗಳು ನೀರುಪಾಲಾಗಿವೆ. ಕಾರಂಜಾ ಜಲಾಶಯ ಭರ್ತಿಯಾಗಿದ್ದು, ಒಳಹರಿವು ಹೆಚ್ಚಾಗಿ ದಾಖಲೆ ಮಟ್ಟದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಎಡ ಹಾಗೂ ಬಲ ದಂಡೆಯ ತಟದ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಸತತ ಮಳೆಯಿಂದ ಮಾಂಜ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಧನೆಗಾಂವ್ ಹಾಗೂ ತೆರಣಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಮಾಂಜ್ರಾ ನದಿಗೆ ಹರಿಬಿಡಲಾಗುತ್ತಿದ್ದು, ನದಿ ತಟದ ಗ್ರಾಮಸ್ಥರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ಸಭೆ ನಡೆಸಲಾಯಿತು.