ಬೀದರ್: ದಿನಕ್ಕೆ ಲಕ್ಷಗಟ್ಟಲೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಬೀದರ್ನಲ್ಲಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ದಿನದಿಂದ ದಿನಕ್ಕೆ ಜನರು ಕಷ್ಟದಲ್ಲಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಬೇಕಾದ ಸರ್ಕಾರಗಳು ಸುಮ್ಮನಾಗಿವೆ. ಅಲ್ಲದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಬಡ ಜನರಿಗೆ ಪ್ಯಾಕೇಜ್ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ಸರ್ಕಾರವೇ ಪರಿಶೀಲನೆ ಮಾಡಲಿ ಎಂದರು.
ದೇಶದ ಆರ್ಥಿಕತೆ ಇದೀಗ ಸರ್ವಕಾಲಿಕ ದಾಖಲೆ ಮಟ್ಟಕ್ಕೆ ಪಾತಾಳಕ್ಕಿಳಿದಿದೆ. ಬಿಜೆಪಿಗರು ಮಾತ್ರ ಅದೇ ಧರ್ಮದ ರಾಜಕಾರಣ ಮಾಡುವಲ್ಲಿ ನಿರತರಾಗಿದ್ದಾರೆ. ದೇಶಾದ್ಯಂತ ಲಕ್ಷಾಂತರ ಯುವಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆಯಾಗಿಲ್ಲ. ಬೇರೆ ಯಾವುದೋ ದೇಶದಲ್ಲಿ ಪ್ರವಾಹ ಬಂದರೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡ್ತಾರೆ. ರಾಜ್ಯದಲ್ಲಿ ಪ್ರವಾಹ ಬಂದು ಜನರ ಸ್ಥಿತಿ ಅಲ್ಲೋಲ ಕಲ್ಲೋಲ ಆದ್ರು, ಸೌಜನ್ಯಕ್ಕಾದ್ರು ಟ್ವೀಟ್ ಮಾಡಿಲ್ಲ. ರಾಜ್ಯದ 25 ಜನರ ಸಂಸದರು ಇದ್ದರು ಪ್ರಧಾನಿ ಮುಂದೆ ನಿಲ್ಲುವ ತಾಕತ್ತು ಅವರಲ್ಲಿ ಇಲ್ಲ ಎಂದಿದ್ದಾರೆ.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತರುವುದರ ಮೂಲಕ ಲ್ಯಾಂಡ್ ಮಾಫೀಯಾ ಪರ ರಾಜ್ಯ ಸರ್ಕಾರ ನಿಂತಿದೆ ಎಂದು ಖಂಡ್ರೆ ಆರೋಪಿಸಿದರು.