ಬೀದರ್: ಬಸವಕಲ್ಯಾಣ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಶೌಚಾಲಯ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಶೌಚಾಲಯ ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ ಎನ್ನುವ ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತ ಆಸ್ಪತ್ರೆ ಆಡಳಿತ ಮಂಡಳಿ, ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಶೌಚಾಲಯದ ಬೀಗ ತೆಗೆದು ರೋಗಿಗಳ ಬಳಕೆಗೆ ಅವಕಾಶ ಕಲ್ಪಿಸಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಅಪರ್ಣಾ ಮಹಾನಂದ, ಆಸ್ಪತ್ರೆಯಲ್ಲಿ ಇರುವ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಗ್ರೂಪ್ ಡಿ ಸಿಬ್ಬಂದಿ ಕೊರತೆ ಎದುರಾಗಿದೆ. ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ನೇಮಕವಾಗುವವರೆಗೆ ವ್ಯವಸ್ಥೆಯಲ್ಲಿ ಅಲ್ಪ ಸಮಸ್ಯೆ ಎದುರಾಗುತ್ತದೆ. ಈ ಸಿಬ್ಬಂದಿ ಕೊರತೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲಿಯೇ ಸಿಬ್ಬಂದಿ ನೇಮಕವಾಗಲಿದೆ ಎಂದು ಭರವಸೆ ನೀಡಿದರು.