ಬೀದರ್: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸತ್ತವರ ಹೆಸರಿನಲ್ಲೂ ಹಣ ಡ್ರಾ ಮಾಡಿದ ಆರೋಪ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದಿದೆ. ಈ ಬಗ್ಗೆ ಒಂದು ವಾರದಲ್ಲಿ ತನಿಖೆ ಮುಗಿಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವನಮಾರಪಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸತ್ತವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಣ ಲಪಟಾಯಿಸಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದರು. ಈ ಬಗ್ಗೆ 'ಈಟಿವಿ ಭಾರತ'ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ಸಿಇಒ ಗ್ಯಾನೇಂದ್ರಕುಮಾರ್ ಗಂಗ್ವಾರ ಅವರು ತಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದರು. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆ ಯಾಕೆ ಮಾಡಿಲ್ಲ. ಗೋಲ್‌ಮಾಲ್ ಆಗಿದೆ ಎಂದು ದೂರು ಬಂದ್ರೂ ಸುಮ್ಮನ್ಯಾಕೆ ಇದ್ದೀರಾ, ಒಂದು ವಾರದಲ್ಲಿ ತನಿಖೆ ಮುಗಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಿಇಒ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲ, ತನಿಖಾ ವರದಿ ಆಧರಿಸಿ ತಪ್ಪಿತಸ್ಥರು ಎಂದು ಸಾಬೀತಾದ್ರೇ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ಯಾನೇಂದ್ರಕುಮಾರ್ ಭರವಸೆ ನೀಡಿದ್ದಾರೆ.