ಬೀದರ್: ಮದುವೆ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತಾಲೂಕಿನ ಸೋಲಪೂರ್ ಗ್ರಾಮದ ಕೆರೆಯ ಸಮೀಪದಲ್ಲಿ ಗುರುವಾರ ನಡೆದಿದೆ. ಶಿವಲೀಲಾ (18) ಕೊಲೆಗೀಡಾಗಿರುವ ಯುವತಿ. ಈ ಹುಡುಗಿ ಬ್ರೀಮ್ಸ್ನಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ತಾಲೂಕಿನ ಚಾಂಬೋಳ ಗ್ರಾಮದ ಆರೋಪಿ ಶ್ರೀನಿವಾಸನು ಶಿವಲೀಲಾ ಓದುತ್ತಿದ್ದ ಕಾಲೇಜಿಗೆ ಬಂದಿದ್ದ. ಈ ವೇಳೆ ಪ್ರಿಯತಮೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡು ಕೆರೆಯ ಬಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಹುಡುಗಿಯ ಕತ್ತು ಹಿಸಿಕಿ ಹತ್ಯೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮಲ್ಲಿಕ್ ಮಿರ್ಜಾಪೂರ್ ಗ್ರಾಮದ ನಿವಾಸಿಯಾಗಿರುವ ಶಿವಲೀಲಾ, ಬೀದರ್ ನಗರದ ಮಂಗಲ್ ಪೇಟೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಹತ್ಯೆಗೆ ಸಂಬಂಧಿಸಿದಂತೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಮಹಿಳೆ ಶವ ಪತ್ತೆ: ಮಹಿಳೆಯೊಬ್ಬಳು ಬಾವಿಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಕಳಸಾಪುರ ವ್ಯಾಪ್ತಿಯ ಸಾಸ್ವಿಹಳ್ಳಿ ಫಾರ್ಮ್ನಲ್ಲಿ ಬುಧವಾರ ನಡೆದಿತ್ತು.
ರುಬಿನಾ ದಾವಲ್ ಸಾಬ್ ಕಣವಿ (27) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಎಂದಿನಂತೆ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಅವರು ವಾಪಸ್ ಬಂದಾಗ ಬಾವಿಯಲ್ಲಿ ರುಬಿನಾ ಶವವಾಗಿ ಪತ್ತೆಯಾಗಿದ್ದಾರೆ. ಈ ಮೃತ ಮಹಿಳೆಯ ಮೂರು ವರ್ಷದ ಮಗು ಜಾವೇದ್ ಕಣವಿ ಕೂಡ ಕಾಣೆಯಾಗಿದ್ದಾನೆ ಎನ್ನಲಾಗುತ್ತಿದ್ದು, ಆತನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದೆ.
ರುಬಿನಾ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ರುಬಿನಾ ಇದೇ ತೋಟದಲ್ಲಿ ಕೆಲಸಕ್ಕಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ರುಬಿನಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು, ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಗದಗ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಇಲ್ಲಿಯ ಜಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ದಲಿತ ಮಹಿಳೆಯೊಬ್ಬರ ಮೇಲೆ ಹಲ್ಲೆ: ಹುಲ್ಲು ಮೇಯುತ್ತಾ ಹೊಲಕ್ಕೆ ಹಸು ನುಗ್ಗಿದ್ದು ಜಮೀನು ಮಾಲೀಕ ದಲಿತ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಘಟನೆ ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಕನಕಗಿರಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕನಕಗಿರಿ ತಾಲ್ಲೂಕಿನ ರಾಂಪೂರ ಗ್ರಾಮದ ಅಮರೇಶಪ್ಪ ಕಲ್ಲಪ್ಪ ಕುಂಬಾರ ಪ್ರಕರಣದ ಆರೋಪಿ.
ಮಹಿಳೆ ನೀಡಿದ ಹಲ್ಲೆ, ಜಾತಿ ನಿಂದನೆ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಕನಕಗಿರಿ ಪೊಲೀಸರು ಆರೋಪಿ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ಶೋಭಾ ರಮೇಶ ಪೂಜಾರ (30) ಎಂದು ಗುರುತಿಸಲಾಗಿದೆ. ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ವಿವರ: ಶೋಭಾ ಅವರಿಗೆ ಸೇರಿದ್ದ ಹಸು ಹುಲ್ಲು ಮೇಯುತ್ತಾ ಸಮೀಪದ ಅಮರೇಶಪ್ಪ ಕುಂಬಾರ ಎಂಬುವವರ ಹೊಲಕ್ಕೆ ನುಗ್ಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಅಮರೇಶಪ್ಪ ಹಸುವನ್ನು ಹಿಡಿದು ತಂದು ತಮ್ಮ ಮನೆಯ ಮುಂದೆ ಕಟ್ಟಿಹಾಕಿದ್ದರು. ಇದನ್ನು ಕೇಳಲು ಹೋದ ಶೋಭಾ ಅವರ ಮೇಲೆಯೇ ಅಮರೇಶಪ್ಪ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣಕ್ಕೆ ಸಮೀಪದಲ್ಲಿದ್ದವರು ಬಂದು ಶೋಭಾ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ದೌರ್ಜನ್ಯ, ಹಲ್ಲೆ ಮಾಡಿರುವ ಬಗ್ಗೆ ಶೋಭಾ ದೂರು ದಾಖಲಿಸಿದ್ದರು. ಹಲ್ಲೆಯ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು.
ಇದನ್ನೂ ಓದಿ: ಎನ್ಒಸಿ ನೀಡಲು ಲಂಚ: ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ