ಬಸವಕಲ್ಯಾಣ: ಜೆಡಿಎಸ್ ಪಕ್ಷ ಜಾತ್ಯಾತೀತ ಪಕ್ಷವಾಗಿದ್ದು, ಪಕ್ಷದಿಂದ ಇದುವರೆಗೆ ಕ್ಷೇತ್ರದಲ್ಲಿ 7 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎನ್ನುವುದನ್ನು ಯಾರು ಮರೆಯಬಾರದು ಎಂದು ಪಕ್ಷದ ತಾಲೂಕು ಅಧ್ಯಕ್ಷ ಶಬ್ಬೀರ ಪಾಶಾಮುಜಾವರ್ ಹೇಳಿದ್ದಾರೆ.
ನಗರದಲ್ಲಿ ಮಾಜಿ ಶಾಸಕ ಮಾರುತಿರಾವ ಮುಳೆ ಅವರ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ತೆಗೆದುಕೊಂಡು ಮಾತನಾಡುವುದು ಸರಿಯಲ್ಲ ಎಂದರು. ಎಂಐಎ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಕಳ್ಳಾಟ ನೋಡಲೆಂದು ನಾನು ಇಲ್ಲಿಗೆ ಬಂದಿದೆ ಎಂದು ಇತ್ತೀಚಗೆ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ. ಇಲ್ಲಿ ಯಾವುದೇ ಕಳ್ಳಾಟ ನಡೆಸಿಲ್ಲ. ನಮ್ಮ ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಇಲ್ಲದ ಕಾರಣ ಎಂಐಎ ಪಕ್ಷದವರು ನಮಗೆ ಬಂದು ಮನವಿ ಮಾಡಿದ ಕಾರಣ ಆ ಪಕ್ಷಕ್ಕೆ ಬೆಂಬಲಿಸಲಾಯಿತು ಎಂದು ತಿಳಿಸಿದರು.
ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಇದ್ದು, ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಮೀರ ಅಜರಲಿ ನವರಂಗ್ ಅವರು ನೀಡಿದ ಹೇಳಿಕೆ ಖಂಡನೆ ವ್ಯಕ್ತಪಡಿಸಿದ ಜೆಡಿಎಸ್ ಅಧ್ಯಕ್ಷರು, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ತನ್ನದೆಯಾದ ಇತಿಹಾಸವಿದೆ. ಇಲ್ಲಿ ಇದುವರೆಗೆ ಜೆಡಿಎಸ್‌ನಿಂದ 7 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ನೀವು ನಗರಸಭೆ ಅಧ್ಯಕ್ಷರಾಗಿದ್ದು, ನಮ್ಮ ಜೆಡಿಎಸ್ ಪಕ್ಷದ ಬೆಂಬಲದಿಂದಲೇ ಎನ್ನುವುದು ಮರೆಯಬಾರದು ಎಂದು ಎಚ್ಚರಿಸಿದರು.