ಬೀದರ್: ಡಿಸೆಂಬರ್ 31ರ ರಾತ್ರಿ ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಮನೆಮಾಡಿತ್ತು. ನೂತನ ವರ್ಷವನ್ನು ಸ್ವಾಗತಿಸಲು ಭಾರತ ಸೇರಿದಂತೆ ವಿಶ್ವದಾದ್ಯಂತ ಎಲ್ಲರೂ ಖುಷಿ ಖುಷಿಯಿಂದ ತಮ್ಮದೇ ಆದ ರೀತಿಯಲ್ಲಿ ಸಜ್ಜಾಗಿದ್ದರು. ಈ ವೇಳೆ ಕೆಲವೆಡೆ ಅವಘಡಗಳು ಸಂಭವಿಸಿದೆ. ಬೀದರ್ ಜಿಲ್ಲೆಯಲ್ಲೂ ವ್ಯಕ್ತಿಯೋರ್ವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವದಹನವಾಗಿದ್ದಾರೆ.
ಹೌದು, ನಿನ್ನೆ ತಡ ರಾತ್ರಿ ಹೊಸ ವರ್ಷಾಚರಣೆಯ ಪಾರ್ಟಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ, ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದಿದೆ.
ಜಗನಾಥ ಹಲಗೆ (60) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬ ಇಬ್ಬರು ತಡ ರಾತ್ರಿ ಪಾರ್ಟಿ ಮಾಡಿ ನಿದ್ದೆಗೆ ಜಾರಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಜಗನಾಥ ಹಲಗೆ ರಕ್ಷಿಸಲು ಮುಂದಾಗಿದ್ದ ಮಾರುತಿ ಎಂಬತಾನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಜಗನಾಥ ಹಲಗೆ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ: ವೃದ್ಧೆಯ ಅಂತ್ಯಕ್ರಿಯೆ ವೇಳೆ ಪಟಾಕಿ ಕಿಡಿಯಿಂದ ಅವಘಡ: 6 ಬೈಕ್, ಗುಡಿಸಲು ಸುಟ್ಟು ಭಸ್ಮ
ಜೋಳ ಕಾಯಲು ಜಮೀನಿನಲ್ಲಿ ಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದರು. ಈ ಗುಡಿಸಲಿನಲ್ಲಿ ರಾತ್ರಿ ಪಾರ್ಟಿ ಮಾಡಿ ಜನನಾಥ ಮತ್ತು ಮಾರುತಿ ಇಬ್ಬರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದುರ್ಘಟನೆ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ತಾಲೂಕಿನ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.