ಬಸವಕಲ್ಯಾಣ : ರೈತರ ಸಂತೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ (ಕೋಡಿಹಳ್ಳಿ ಚಂದ್ರಶೇಖರ ಬಣ) ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆರಳಿದ ರೈತರ ನಿಯೋಗ, ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳುವಂತೆ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹೂವು, ಹಣ್ಣು, ತರಕಾರಿ ಸೇರಿ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ರೈತರ ಬೆಳೆಗಳಿಗೆ ಅಗತ್ಯ ಬೆಲೆ ಕಲ್ಪಿಸದೇ ರೈತರ ಸುಲಿಗೆ ನಡೆಸಿದ್ದಾರೆ. ಹೀಗಾಗಿ, ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ತೋಟಗಾರಿಕೆ ಬೆಳೆ ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಅಗತ್ಯವಿದೆ. ಎಪಿಎಂಸಿ ವತಿಯಿಂದ ತಕ್ಷಣ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಜಮಖಂಡಿ, ಪ್ರಧಾನ ಕಾರ್ಯದರ್ಶಿ ಸುಭಾಷ್ ರಗಟೆ, ಪ್ರಮುಖರಾದ ಗುಂಡಪ್ಪ ಬಿರಾದಾರ್, ಅಂಜದ ಖಾನ್, ಮೇರೆಪ್ಪ ಪಾಟೀಲ ಸೇರಿ ಸಂಘದ ಪದಾಧಿಕಾರಿಗಳು, ತಾಲೂಕಿನ ವಿವಿಧಡೆಯಿಂದ ಆಗಮಿಸಿದ ರೈತರು ಉಪಸ್ಥಿತರಿದ್ದರು.