ಬಸವಕಲ್ಯಾಣ (ಬೀದರ್): ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್ ವಿಧಿಸಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಕರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಜಮಖಂಡಿ ನೇತೃತ್ವದ ರೈತರು ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿ ಮನವಿ ಪತ್ರ ಸಲ್ಲಿಸಿದರು.
ಕೊರೊನಾ ಭೀತಿಯಿಂದ ಕಳೆದ ಎರಡು ತಿಂಗಳಿಂದ ಜಾರಿಗೊಳಿಸಿದ ಲಾಕ್ಡೌನ್ನಿಂದಾಗಿ ರೈತರು ಬೆಳೆದ ಫಸಲುಗಳು ಮಾರಾಟ ಮಾಡಲು ಆಗದೆ ನಷ್ಟ ಅನುಭವಿಸಿದ್ದಾರೆ. ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿ, ಜೀವನ ನಡೆಸುವುದು ಕಷ್ಟವಾಗಿದೆ ಎಂದು ರೈತರು ಅಲವತ್ತುಕೊಂಡರು.
ರೈತನ ಕಳಕಳಿ ಹೊಂದಿರುವ ಮುಖ್ಯಮಂತ್ರಿಗಳು ಇತರರಿಗೆ ನೀಡಿದ ಸೌಲಭ್ಯಗಳಂತೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮುಂಬರುವ ಮುಂಗಾರು ಬಿತ್ತನೆಗೆ ಹೊಸ ಸಾಲ ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಕೋರಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ರೈತರು ಬೆಳೆದ ಆಹಾರ ಧಾನ್ಯಗಳು ಕಾರ್ಪೊರೇಟರ್ಗಳು ಖರೀದಿಸುವ ವ್ಯವಸ್ಥೆ ಜಾರಿ ಆಗುವುದು ಬೇಡ. ಇದರಿಂದ ರೈತರು ಮತ್ತಷ್ಟು ಸಮಸ್ಯೆಗೆ ಸಿಲುಕುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.