ಬೀದರ್: ತಾಲೂಕಿನ ಅತ್ತಿವಾಳ ಗ್ರಾಮದ ರೈತನೋರ್ವ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ದತಿ ಅಳವಡಿಸಿಕೊಂಡು, ಕಡಿಮೆ ನೀರಿನಲ್ಲಿ ಸಾವಯವ ಗೊಬ್ಬರ ಬಳಸಿ ವೈಜ್ಜಾನಿಕವಾಗಿ ಬೆಳೆಯುವುದರ ಮೂಲಕ ಗ್ರಾಮದಲ್ಲಿ ಮಾದರಿ ರೈತನಾಗಿ ಹೊರಹೊಮ್ಮಿದ್ದಾನೆ.
ಹೌದು.. ಗ್ರಾಮದ ರೈತ ನಾಗರಾಜ್ ಪಾಟೀಲ್ ತನ್ನ ಮೂರು ಎಕರೆಯಲ್ಲಿ ಶುಂಠಿ, ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು, ಐನೂರು ಕ್ವಿಂಟಾಲ್ಗೂ ಅಧಿಕ ಶುಂಠಿ ಬೆಳೆ ಮತ್ತು ಮೂವತ್ತು ಕ್ವಿಂಟಲ್ ಟೊಮ್ಯಾಟೊ ಬೆಳೆಯ ಇಳುವರಿ ಪಡೆದು ಲಕ್ಷಾಂತರ ರೂ. ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾನೆ.
ಆರೇಳು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದ ನಾಗರಾಜ್ ಪಾಟೀಲ್ಗೆ ಹಣ ಮತ್ತು ಸಮಯ ವ್ಯರ್ಥವಾದವೇ ವಿನಃ ಹೇಳಿಕೊಳ್ಳುವಂಥ ಲಾಭ ಬರಲಿಲ್ಲ. ಮೊದಲು ಕೃಷಿಯಲ್ಲಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದ ನಾಗರಾಜ್, ವೈಜ್ಞಾನಿಕ ಪದ್ದತಿ ಮೂಲಕ ಕೃಷಿ ಮಾಡುತ್ತಿರುವುದರಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ನೀರಿನ ಅನುಕೂಲತೆ ಇದ್ದವರು ತೋಟಗಾರಿಕೆ ಅಧಿಕಾರಿಗಳ ಮತ್ತು ಅನುಭವಿ ರೈತ ಮಿತ್ರರ ಸಲಹೆ ಪಡೆದು ಶುಂಠಿ ಮತ್ತು ಟೊಮ್ಯಾಟೊ ಬೆಳೆಯನ್ನು, ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿ, ಕಾಲಕಾಲಕ್ಕೆ ತಪ್ಪದೇ ಗೊಬ್ಬರ, ಔಷಧೋಪಚಾರ ಮಾಡಿದಲ್ಲಿ ಖಂಡಿತ ಬೆಳೆ ಚೆನ್ನಾಗಿ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಬಂಪರ್ ಶುಂಠಿ ಮತ್ತು ಟೊಮ್ಯಾಟೊ ಬೆಳೆಯನ್ನು ಬೆಳೆಯುವುದರ ಮೂಲಕ ರೈತ ನಾಗರಾಜ್ ಮಾದರಿಯಾಗಿದ್ದಾನೆ.