ಬಸವಕಲ್ಯಾಣ: ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಸರ್ಕಾರದಿಂದ ವಿವಿಧ ಪೌಷ್ಟಿಕಾಂಶಗಳುಳ್ಳ ಆಹಾರ ನೀಡಲಾಗುತ್ತಿದ್ದು, ಪ್ರತಿ ಮಗುವಿಗೆ ಕಡ್ಡಾಯವಾಗಿ ಆಹಾರ ವಿತರಿಸುವ ಮೂಲಕ ಸಮಸ್ಯೆ ನಿವಾರಣೆಗೆ ಕಾಳಜಿ ವಹಿಸಬೇಕೆಂದು ತಾ.ಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್ ಸಲಹೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ್ ಮಾಸಾಚರಣೆ ನಿಮಿತ್ತ ಶಿಶು ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ನಿವಾರಣೆಗಾಗಿ ಎಲ್ಲರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಸಾವಿತ್ರಿ ಸಲಗರ್ ಮಾತನಾಡಿ, ಅಪೌಷ್ಟಿಕತೆ ಮುಕ್ತ ಭಾರತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಉತ್ತಮ ಕಾರ್ಯಗಳನ್ನು ಯೋಜಿಸಿದ್ದು, ಪೌಷ್ಟಿಕಾಂಶದ ಕೊರತೆ ಇರುವಂತ ಪ್ರಕರಣಗಳನ್ನು ಕಡಿತಗೊಳಿಸುವ ಜವಾಬ್ದಾರಿ ಹಾಗೂ ಅಪೌಷ್ಟಿಕತೆ ಮುಕ್ತ ಭಾರತಕ್ಕಾಗಿ ಪ್ರತಿಯೊಬ್ಬರಿಗೂ ಕಾಳಜಿ ವಹಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕಲ್ಮಾಲ್ಕರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.