ಬಸವಕಲ್ಯಾಣ(ಬೀದರ್): ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣವನ್ನು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ತೀವ್ರವಾಗಿ ಖಂಡಿಸಿದ್ದಾರೆ.
19 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆಯಲಾಗಿದೆ. ಆದರೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಅಲ್ಲಿಯ ಬಿಜೆಪಿಯ ಯೋಗಿ ಸರ್ಕಾರ ಆರೋಪಿಗಳಿಗೆ ರಕ್ಷಣೆ ನೀಡಿದ್ದಲ್ಲದೆ, ಸಂತ್ರಸ್ತೆ ಕುಟುಂಬದವರಿಗೆ ಕಿರುಕುಳ ನೀಡಿದೆ. ಸಂತ್ರಸ್ತೆಗೆ ಉತ್ತಮ ಚಿಕಿತ್ಸೆಯೂ ನೀಡಿಲ್ಲ. ಕೃತ್ಯ ನಡೆದು ಒಂದು ವಾರ ಕಳೆದ್ರೂ ಪ್ರಕರಣ ದಾಖಲಿಸಿಕೊಳ್ಳದೆ ಇಡೀ ಘಟನೆಯನ್ನೇ ಮರೆ ಮಾಚಲು ಯತ್ನಿಸಿತ್ತು ಎಂದು ಖಂಡ್ರೆ ಆರೋಪಿಸಿದರು.
ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಅಲ್ಲಿ ಜಂಗಲ್ ರಾಜ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ತೆರಳಿದ ನಮ್ಮ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಪ್ರಿಯಂಕಾ ಗಾಂಧಿ ಅವರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧ ದೂರು ದಾಖಲಿಸಿರೋದು ಖಂಡನೀಯ ಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ಸಿಗುವವರೆಗೆ ನಿರಂತರ ಹೋರಾಟ ನಡೆಸಲಾಗುತ್ತದೆ ಎಂದು ಅವರು, ಉತ್ತರಪ್ರದೇಶದಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.